ನೆರವಿನ ಹಸ್ತ ಬೇಕೇ ಹೊರತು ಉಪದೇಶದ ಬುರುಡೆ ಮಾತಲ್ಲ: ಮೋದಿ ಭಾಷಣಕ್ಕೆ ಸಿದ್ದು ವ್ಯಂಗ್ಯ

ಬೆಂಗಳೂರು: ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಕೊರೊನಾ ಸೋಂಕಿನಿಂದ ತತ್ತರಿಸಿಹೋಗಿರುವ ರಾಜ್ಯಗಳಿಗೆ ತುರ್ತಾಗಿ ಬೇಕಾಗಿರುವುದು ನೆರವಿನ ಹಸ್ತವೇ ಹೊರತು ಉಪದೇಶದ ಬುರುಡೆ ಮಾತಲ್ಲ. ಇಂದು ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣ ಅತ್ಯಂತ ನಿರಾಶದಾಯಕ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸೋಂಕಿತರು ಆಮ್ಲಜನಕ ಇಲ್ಲದೆ, ಐಸಿಯು ಹಾಸಿಗೆಗಳಿಲ್ಲದೆ, ರೆಮಿಡಿಸಿವೆರ್‍ನಂತಹ ಪ್ರಾಣರಕ್ಷಕ ಔಷಧಿ ಸಿಗದೆ ಜೀವ ಕಳೆದುಕೊಳ್ಳುತ್ತಿದ್ದಾರೆ. ಈ ಸಮಸ್ಯೆಗಳಿಗೆ ಯಾವುದೇ ಪರಿಹಾರ ನೀಡದ ಮೋದಿ ಜನತೆಗೆ ಜವಾಬ್ದಾರಿಯ ಪಾಠ ಹೇಳಿದ್ದಾರೆ. ಪ್ರಧಾನಿಗಳೇ, ಮೊದಲು ನಿಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿ ಎಂದು ಕಿವಿ ಮಾತು ಹೇಳಿದ್ದಾರೆ. ಇದನ್ನೂ ಓದಿ: ಲಾಕ್‍ಡೌನ್ ಅಂತಿಮ ಅಸ್ತ್ರ- ದೇಶವಾಸಿಗಳಿಗೆ ಧೈರ್ಯ ತುಂಬಿದ ಪ್ರಧಾನಿ ಮೋದಿ

ನಿಮ್ಮ ತಲೆ ಮೇಲೆ ನಿಮ್ಮ ಕೈ: ಕೊರೊನಾ ಉಲ್ಭಣವಾದ ಕಾರಣದಿಂದಾಗಿ ಲಾಕ್‍ಡೌನ್ ಅನಿವಾರ್ಯ ಎಂಬಂತೆ ರಾಜ್ಯ ಸರ್ಕಾರ ಮಾತನಾಡುತ್ತಿದೆ. ಲಾಕ್ ಡೌನ್ ಹೇರಿದರೆ ಕಷ್ಟ ನಷ್ಟಕ್ಕೀಡಾಗುವ ಜನತೆಗೆ ಕೇಂದ್ರ ಸರ್ಕಾರ ನೀಡುವ ನೆರವಿನ ಘೋಷಣೆಯನ್ನು ಜನ ನಿರೀಕ್ಷಿಸಿದ್ದರು. ಮೋದಿ ಭಾಷಣ? ನಿಮ್ಮ ತಲೆ ಮೇಲೆ ನಿಮ್ಮ ಕೈ? ಎಂಬ ಸಂದೇಶ ನೀಡಿದೆ ಎಂದ ಅವರು, ಕೊರೊನಾ ಪರಿಣಾಮವನ್ನು ಸಮರ್ಥವಾಗಿ ನಿರ್ವಹಿಸಲಾಗದೆ ರಾಜ್ಯದ ಆರ್ಥಿಕ ಸ್ಥಿತಿ ದಿವಾಳಿಯ ಅಂಚಿಗೆ ಬಂದು ನಿಂತಿದೆ. ಇದಕ್ಕೆ ನ್ಯಾಯಬದ್ಧವಾಗಿ ತೆರಿಗೆ ಪಾಲನ್ನು ನೀಡದಿರುವ ಕೇಂದ್ರ ಸರ್ಕಾರವೂ ಕಾರಣ. ಪ್ರಧಾನಿಯವರೇ, ನೀವು ವಿಶೇಷ ಆರ್ಥಿಕ ನೆರವು ಕೊಡುವುದು ಬೇಡ, ನಮ್ಮ ನ್ಯಾಯಬದ್ಧ ಪಾಲನ್ನಷ್ಟಾದರೂ ನೀಡಿ ಪುಣ್ಯ ಕಟ್ಟಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *