ನೂರಾರು ಸಂಖ್ಯೆಯಲ್ಲಿ ನಾಯಿ ತಲೆಬುರುಡೆ ಪತ್ತೆ- ಕುರಿ ಮಾಂಸದ ಹೆಸರಲ್ಲಿ ನಾಯಿ ಮಾಂಸ ಮಾರಾಟ?

ಹಾಸನ: ನೂರಾರು ಸಂಖ್ಯೆಯಲ್ಲಿ ನಾಯಿಗಳ ತಲೆಬುರುಡೆಗಳು ಪತ್ತೆಯಾಗಿದ್ದು, ಕುರಿ ಮಾಂಸ ಎಂದು ಹೇಳಿ ನಾಯಿ ಮಾಂಸ ಮಾರಾಟ ಮಾಡುತ್ತಿದ್ದಾರಾ ಎಂಬ ಅನುಮಾನ ಇದೀಗ ಮೂಡಿದೆ. ನಾಯಿ ಬುರುಡೆಗಳು ಪತ್ತೆಯಾಗುತ್ತಿದ್ದಂತೆ ಜಿಲ್ಲೆಯ ಜನ ಹೌಹಾರಿದ್ದಾರೆ.

ಜಿಲ್ಲೆಯ ಹೊಳೆನರಸೀಪುರ ತಾಲೂಕಿನ, ಸೂರನಹಳ್ಳಿ ಗ್ರಾಮದ ಸಮೀಪದ ಕೊಲ್ಲಿಹಳ್ಳ ಎಂಬ ಪ್ರದೇಶದಲ್ಲಿ ನಾರಾರು ಸಂಖ್ಯೆಯಲ್ಲಿ ನಾಯಿಗಳ ತಲೆಬುರುಡೆಗಳು ಪತ್ತೆಯಾಗಿವೆ. ಹೀಗಾಗಿ ಮಾಂಸಕ್ಕಾಗಿ ನಾಯಿಗಳನ್ನು ಕೊಲ್ಲುವ ತಂಡ ಕಾರ್ಯಚರಣೆ ನಡೆಸುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ನಾಯಿಗಳ ರುಂಡದ ಭಾಗ ಪತ್ತೆಯಾಗಿರುವ ಕೊಲ್ಲಿಹಳ್ಳದ ಸಮೀಪ ಜನ ಸಂಚಾರ ಕಡಿಮೆಯಿದ್ದು, ಹಲವಾರು ವರ್ಷಗಳಿಂದ ದಟ್ಟ ಬೇಲಿ ಬೆಳೆದಿದೆ.

ನಿರ್ಜನ ಪ್ರದೇಶವಾದ್ದರಿಂದ ಮಾಂಸಕ್ಕಾಗಿ ನಾಯಿಗಳನ್ನು ಕೊಲ್ಲುವವರು ಬುರುಡೆಗಳನ್ನು ತಂದು ಎಸೆಯಲು ಈ ಪ್ರದೇಶ ಆಯ್ಕೆ ಮಾಡಿಕೊಂಡಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ನೂರಾರು ಸಂಖ್ಯೆಯಲ್ಲಿ ನಾಯಿಗಳ ರುಂಡದ ಭಾಗ ಪತ್ತೆಯಾಗಿರುವುದನ್ನು ಗಮನಿಸಿದರೆ, ಮಾಂಸಕ್ಕಾಗಿ ನಾಯಿಗಳನ್ನು ಕೊಲ್ಲುವ ಜಾಲವೊಂದು ತಾಲೂಕಿನಲ್ಲಿ ಕಾರ್ಯಚರಣೆ ನಡೆಸುತ್ತಿರುವ ಬಗ್ಗೆಯೂ ದಟ್ಟ ಅನುಮಾನ ಮೂಡಿದೆ.

ಶ್ವಾನಗಳ ಮಾರಣ ಹೋಮ ಪ್ರಾಣಿ ಪ್ರಿಯರಲ್ಲಿ ತೀವ್ರ ಆಕ್ರೋಶ ಮೂಡಿಸಿದ್ದು, ಈಗಾಗಲೇ ಪಟ್ಟಣದ ಮಾಂಸ ಪ್ರಿಯರು ಕಂಗಾಲಾಗಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟ ಇಲಾಖೆಯವರು ಸೂಕ್ತ ತನಿಖೆ ನಡೆಸಿ ನಾಯಿಗಳ ಮಾರಣ ಹೋಮ ನಡೆಸುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Comments

Leave a Reply

Your email address will not be published. Required fields are marked *