ನೀವು ಎಷ್ಟು ಸಿಡಿ ಮಾಡಿದ್ದೀರಿ? ನಿಮ್ಮದೆಷ್ಟು ಸಿಡಿ ಇದೆ- ಸೋಮಶೇಖರ್‌ಗೆ ಕಾಂಗ್ರೆಸ್‌ ಪ್ರಶ್ನೆ

ಬೆಂಗಳೂರು: ಸಿಡಿ ಮಾಡಿದ್ದು ಕಾಂಗ್ರೆಸ್‌ನವರೇ, ನಾನೂ ಕಾಂಗ್ರೆಸ್‌ನಲ್ಲಿದ್ದವನೇ ಎಂದಿರುವ ಸಚಿವ ಎಸ್ ಟಿ ಸೋಮಶೇಖರ್ ಅವರಿಗೆ ನೀವೆಷ್ಟು ಸಿಡಿ ಮಾಡಿದ್ದೀರಿ? ನಿಮ್ಮದೆಷ್ಟು ಸಿಡಿ ಇದೆ? ಅದಕ್ಕೆಷ್ಟು ಖರ್ಚು ಮಾಡಿದ್ದೀರಿ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ಬಾಂಬೆಯ ಹೋಟೆಲ್‌ನಲ್ಲಿ ಕ್ವಾರೆಂಟೈನ್ ಆಗಿದ್ದಿರಲ್ಲ. ಆಗ ನಿಮ್ಮ ಸಿಡಿ ಯಾರು ಮಾಡಿದ್ದು? ಕೋರ್ಟಿಗೆ ಅರ್ಜಿ ಏಕೆ ಸಲ್ಲಿಸಿದಿರಿ ಎಂದು ಸೋಮಶೇಖರ್‌ ಮತ್ತು ಬಿಜೆಪಿ ನಾಯಕರನ್ನು ಪ್ರಶ್ನಿಸಿ ಸರಣಿ ಟ್ವೀಟ್‌ ಮಾಡಿ ಕುಟುಕಿದೆ.

ಟ್ವೀಟ್‌ನಲ್ಲಿ ಏನಿದೆ?
ಕಾಂಗ್ರೆಸ್ ಮೇಲೆ ಆರೋಪಿಸುವ ಸೋಮಶೇಖರ್ ಅವರೇ ನಿಮ್ಮ ಕಳ್ಳ ಮನಸೇಕೆ ಹುಳ್ಳುಳ್ಳಗೆ ಆಡುತ್ತಿದೆ? ಹೆಗಲು ಮುಟ್ಟಿ ನೋಡಿಕೊಂಡವರಂತೆ ಓಡಿ ಹೋಗಿ ತಡೆಯಾಜ್ಞೆ ಅರ್ಜಿ ಏಕೆ ಸಲ್ಲಿಸಿದಿರಿ?

ಮನೆಹಾಳು ಕೆಲಸ ಯಾರು ಮಾಡುವವರು ಎನ್ನುವುದನ್ನ ಬಸನ ಗೌಡ ಪಾಟೀಲ್‌ ಯತ್ನಾಳ್‌ ಬಳಿ ವಿಚಾರಿಸಿ ಅವರು ಹೇಳುತ್ತಾರೆ. ವಿಜಯೇಂದ್ರ ಅವರು ಸಿಡಿ ತಯಾರಿಕಾ ಘಟಕವನ್ನು ಹೊಂದಿರುವ ಬಗ್ಗೆ ಘಂಟಾಘೋಷವಾಗಿ ಹೇಳಿದ್ದಾರೆ. ಬ್ಲಾಕ್ಮೇಲ್ ಜನತಾ ಪಾರ್ಟಿ ಎಂದು ನಿಮ್ಮವರೇ ಸಾರಿ ಸಾರಿ ಹೇಳಿದ್ದಾರೆ.

ಸಿಡಿ ಬಾಂಬ್ ಸಿಡಿಯುವ ಹಲವು ದಿನಗಳ ಮೊದಲೇ ಯತ್ನಾಳ್ ಸತ್ಯ ಸಿಡಿಸಿದ್ದರು. ನಿಮ್ಮ ಮನೆಯ ಒಳ ಸತ್ಯ ನಿಮ್ಮವರಿಗಲ್ಲದೆ ಇನ್ಯಾರಿಗೆ ತಿಳಿದೀತು?

ಕಾಮಿಡಿ ಕಿಂಗ್ ಕಟೀಲ್‌ ಅವರೇ, ಒಬ್ಬರ ಸಿಡಿ ಹೊರಬಂದಿದೆ. 6 ಜನ ಗೋಳಾಡಿಕೊಂಡು ಅರ್ಜಿ ಸಲ್ಲಿಸಿದ್ದಾರೆ. ಇನ್ನೂ 13 ಜನ ಅರ್ಜಿ ಸಲ್ಲಿಸಲು ಕಾದಿದ್ದಾರೆ. ನಿಮ್ಮ ಮನೆಯೇ ಸಿಡಿ ಸುನಾಮಿಗೆ ಸಿಡಿದು ಹೋಗಿದೆ!

ಬಿಜಪಿ ಬ್ಲೂ ಬಾಯ್ಸ್‌ಗಳ ರಾಜೀನಾಮೆ ಪಡೆದು, ಉಚ್ಛಾಟಿಸಿ ನಿಮ್ಮ ಬೆನ್ನು ಮೂಳೆಯ ಗಟ್ಟಿತನ ಹಾಗೂ ನಿಮ್ಮ ಪಕ್ಷದ ನೈತಿಕತೆ ಪ್ರದರ್ಶಿಸಿ.

ಸೋಮಶೇಖರ್‌ ಅವರೇ, ಬಿ ವೈ ವಿಜಯೇಂದ್ರ ತಮ್ಮ ವಿರೋಧಿಗಳ ಸಿಡಿ ತಯಾರಿಸುತ್ತಾರೆ ಎಂದಿದ್ದ ಬಸನಗೌಡ ಪಾಟೀಲ್‌ ಅವರು ಇಂದು ಮತ್ತೊಮ್ಮೆ ಇನ್ನೂ 23 ಸಿಡಿಗಳಿವೆ ಎಂದಿದ್ದಾರೆ. ಸರ್ಕಾರ ಸಿಡಿ ತನಿಖೆಯನ್ನು ವಿಜಯೇಂದ್ರರವರಿಂದಲೇ ಏಕೆ ಶುರು ಮಾಡಬಾರಾದು? ಸರ್ಕಾರ ಉನ್ನತ ಮಟ್ಟದ ತನಿಖೆಗೆ ಏಕೆ ವಹಿಸುತ್ತಿಲ್ಲ? ತಮ್ಮದೇ ಬುಡಕ್ಕೆ ಬರುವ ಭಯದಲ್ಲಿದೆಯೇ?

Comments

Leave a Reply

Your email address will not be published. Required fields are marked *