ನೀರಾವರಿ ಇಲಾಖೆಗೆ 12 ಸಾವಿರ ಕೋಟಿ ನೀಡಿರುವುದು ದುಡ್ಡು ಲೂಟಿ ಮಾಡೋಕೆ: ಹೆಚ್‍ಡಿಕೆ

ಮಂಡ್ಯ: ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎನ್ನುತ್ತಾರೆ, ಹೀಗಿರುವಾಗ ತರಾತುರಿಯಲ್ಲಿ ನೀರಾವರಿ ಇಲಾಖೆಯ ನಾಲ್ಕು ನಿಗಮಗಳಿಗೆ 12 ಸಾವಿರ ಕೋಟಿ ಯೋಜನೆಗೆ ಅನುಮತಿ ನೀಡುತ್ತಿರುವುದು ದುಡ್ಡು ಹೊಡೆಯುವುದಕ್ಕಾಗಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಬಿಎಸ್‍ವೈ ವಿರುದ್ಧ ಆರೋಪ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಯಡಿಯೂರಪ್ಪ ಅವರು ಕೆಲವೇ ದಿನಗಳಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ಹೇಳುತ್ತಿದ್ದಾರೆ. ಹೀಗಿರುವ ಸಮಯಲ್ಲಿ ಇದ್ದಕ್ಕಿದ್ದ ಹಾಗೆ ದಿಢೀರನೆ ನೀರಾವರಿ ಇಲಾಖೆಗೆ 12 ಸಾವಿರ ಕೋಟಿ ರೂಪಾಯಿಗಳ ಅನುದಾನವನ್ನು ನೀಡಿರುವುದು ಅನುಮಾನಗಳನ್ನು ಹುಟ್ಟು ಹಾಕಿದೆ. ಜನರಿಗೆ ನೀರು ಕೊಡಲು ಈ ಯೋಜನೆಯನ್ನು ರೂಪಿಸಿದ್ದೀರಾ? ದುಡ್ಡು ಹೊಡೆಯುವ ಪ್ಲಾನ್ ಇದು. ಈಗಲೂ ರಾಜ್ಯದ ತೆರಿಗೆ ಹಣವನ್ನು ಲೂಟಿ ಮಾಡೋದಕ್ಕೆ ಈ ಪ್ಲಾನ್ ಮಾಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಎರಡು ತಿಂಗಳ ಹಿಂದೆಯೇ ರಾಜೀನಾಮೆಗೆ ಮುಂದಾಗಿದ್ದೆ: ಸಿಎಂ ಬಿಎಸ್‍ವೈ

ಸರ್ಕಾರಕ್ಕೆ ಹಳೆ ಕರ್ನಾಟಕದಿಂದಲೇ ಹೆಚ್ಚಿನ ಪ್ರಮಾಣದ ತೆರಿಗೆ ಬರುತ್ತದೆ. ಹೀಗಿರುವಾಗ ಹಳೆ ಕರ್ನಾಟಕಕ್ಕೆ ಕೇವಲ 1 ಸಾವಿರ ಕೋಟಿಯನ್ನು ಮಾತ್ರ ಮಂಜೂರು ಮಾಡಿದ್ದಾರೆ. ನಮಗೆ ಹಳೆಯದ್ದು ಹಾಗೂ ಹೊಸ ಕರ್ನಾಟಕ ಎಂದು ನಾನು ಹೇಳುವುದಿಲ್ಲ. ಆ ಭಾಗಕ್ಕೆ ಆದ್ಯತೆ ನೀಡುವ ರೀತಿ ಈ ಭಾಗಕ್ಕೂ ಆದ್ಯತೆ ನೀಡಿ, ಇಲ್ಲಿನ ಜನರು ನಿಮಗೇನು ದ್ರೋಹ ಮಾಡಿದ್ದಾರೆ ಎಂದು ಯಡಿಯೂರಪ್ಪ ವಿರುದ್ಧ ಹೆಚ್‍ಡಿಕೆ ಆಕ್ರೋಶ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *