ನಿಸರ್ಗ ಚಂಡಮಾರುತ- ವಿದೇಶದಲ್ಲಿದ್ದರೂ ತವರಿನ ಬಗ್ಗೆ ಕಾಳಜಿ ತೋರಿದ ಪ್ರಿಯಾಂಕಾ

ಮುಂಬೈ: ಬಾಲಿವುಡ್ ದೇಸಿ ಬೆಡಗಿ ಪ್ರಿಯಾಂಕಾ ಚೋಪ್ರಾ ವಿದೇಶದಲ್ಲಿದ್ದುಕೊಂಡೇ ಭಾರತದ ಬಗ್ಗೆ ಹಾಗೂ ಮುಂಬೈ ಜನತೆ, ತಮ್ಮ ಕುಟುಂಬದ ಬಗ್ಗೆ ಕಾಳಜಿ ವಹಿಸುತ್ತಿದ್ದು, ನಿಸರ್ಗ ಚಂಡಮಾರುತದ ಕುರಿತು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ.

ನಿಸರ್ಗ ಸೈಕ್ಲೋನ್ ಕರಾವಳಿ ಭಾಗದ ಜನರನ್ನು ನಿದ್ದೆಗೆಡಿಸಿದ್ದು, ಮುಂಬೈಗೆ ಹೆಚ್ಚು ಪರಿಣಾಮ ಬೀರಲಿದೆ ಎಂದು ಅಂದಾಜಿಸಲಾಗಿದೆ. ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದ್ದು, ಮುಂಬೈ ಸೇರಿದಂತೆ ಕರಾವಳಿ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಆದರೂ ಈ ಕುರಿತು ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರಿಯಾಂಕಾ ಚೋಪ್ರಾ ಪ್ರಸ್ತುತ ತಮ್ಮ ಪತಿ ನಿಕ್ ಜಾನ್ಸ್‍ರೊಂದಿಗೆ ಲಾಸ್ ಎಂಜೆಲಿಸ್‍ನಲ್ಲಿದ್ದಾರೆ. ಆದರೂ ಭಾರತದ ಬಗ್ಗೆ ಕಾಳಜಿ ವಹಿಸುತ್ತಿದ್ದು, ಕೊರೊನಾ ವೈರಸ್ ಎದುರಿಸಲು ಈ ಹಿಂದೆ ಸಹ ಪಿಎಂ ಕೇರ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಮೂಲಕ ಧನ ಸಹಾಯ ಮಾಡಿದ್ದಾರೆ. ಅಲ್ಲದೆ ಕೊರೊನಾ ವಾರಿಯರ್ಸ್‍ಗಾಗಿ ಸಂಗೀತವನ್ನೂ ರಚಿಸಿ ಧನ್ಯವಾದ ಸರ್ಪಿಸಿದ್ದರು. ಇದೀಗ ನಿಸರ್ಗ ಚಂಡಮಾರುತದ ವಿಚಾರದಲ್ಲಿಯೂ ಕಾಳಜಿ ವಹಿಸುತ್ತಿದ್ದಾರೆ.

ಹೌದು ನಿಸರ್ಗ ಚಂಡಮಾರುತ ಮುಂಬೈನಲ್ಲಿ ಪ್ರತಿ ಗಂಟೆಗೆ 120 ಕಿ.ಮೀ.ವೇಗದಲ್ಲಿ ಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಈಗಾಗಲೇ ಹೆಲ್ಪ್‍ಲೈನ್ ಘೋಷಿಸಿದ್ದು, ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ಅಲ್ಲದೆ ಚಂಡಮಾರುತದ ಭೀಕರತೆ ಹೆಚ್ಚಾಗುವ ಹಿನ್ನೆಲೆ ಪ್ರಿಯಾಂಕಾ ಚೋಪ್ರಾ ಮುಂಬೈ ನಿವಾಸಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿರುವ ಅವರು, ಮುಂಬೈ ಪ್ರಸಿದ್ಧ ಬಾಂದ್ರಾ-ವರ್ಲಿ, ಸೀ ಲಿಂಕ್ ರಸ್ತೆ ಚಿತ್ರವನ್ನು ಹಾಕಿ ಅದರ ಕೆಳಗೆ ಸಾಲುಗಳನ್ನು ಬರೆದಿದ್ದಾರೆ. ನಿಸರ್ಗ ಸೈಕ್ಲೋನ್ ಮುಂಬೈನತ್ತ ಧಾವಿಸುತ್ತಿದೆ. ನನ್ನ ಪ್ರೀತಿಯ ತವರು ಮುಂಬೈನಲ್ಲಿ ನನ್ನ ತಾಯಿ ಮತ್ತು ಸಹೋದರ ಸೇರಿದಂತೆ 20 ದಶಲಕ್ಷಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. 1891ರ ನಂತರ ಮುಂಬೈ ನಗರ ಇಂತಹ ಭೀಕರ ಚಂಡಮಾರುತವನ್ನು ಎದುರಿಸಿಲ್ಲ. ಜಗತ್ತು ತುಂಬಾ ಹತಾಶವಾಗಿರುವ ಸಮಯದಲ್ಲಿ, ಇದು ವಿಶೇಷ ವಿನಾಶಕಾರಿಯಾಗಿದೆ ಈ ವರ್ಷ ಅತ್ಯಂತ ಭೀಕರವಾಗಿದೆ. ಎಲ್ಲರೂ ಸುರಕ್ಷಿತವಾಗಿರಿ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಿ, ಮಾರ್ಗಸೂಚಿಗಳನ್ನು ಅನುಸರಿಸಿ. ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ ಎಂದು ಬರೆದಿದ್ದಾರೆ.

ಮುನ್ನೆಚ್ಚರಿಕಾ ಕ್ರಮಗಳಿಗಾಗಿ ಸ್ವೈಪ್ ಅಪ್ ಮಾಡಿ ಎಂದು ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ)ನ ಇನ್‍ಸ್ಟಾಗ್ರಾಮ್ ಲಿಂಕ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್‍ನಲ್ಲಿ ನಿಸರ್ಗ ಸೈಕ್ಲೋನ್ ಕುರಿತ ಮುನ್ನೆಚ್ಚರಿಕಾ ಕ್ರಮಗಳನ್ನು ತಿಳಿಸಲಾಗಿದೆ. ಈ ಮೂಲಕ ಪ್ರಿಯಾಂಕಾ ಚೋಪ್ರಾ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸುರಕ್ಷಿತವಾಗಿರುವಂತೆ ತಿಳಿಸಿದ್ದಾರೆ. ಅಂದಹಾಗೆ ಪ್ರಿಯಾಂಕಾ ಚೋಪ್ರಾ ತಾಯಿ ಮಧು ಚೋಪ್ರಾ ಹಾಗೂ ಸಹೋದರ ಸಿದ್ಧಾರ್ಥ್ ಮುಂಬೈನಲ್ಲೇ ವಾಸಿಸುತ್ತಿದ್ದಾರೆ.

129 ವರ್ಷಗಳಲ್ಲಿ ಮುಂಬೈಗೆ ಅಪ್ಪಳಿಸುತ್ತಿರುವ ಮೊದಲ ಚಂಡಮಾರುತ ಇದಾಗಿದ್ದು, 1891ರಲ್ಲಿ ತೀವ್ರ ಸ್ವರೂಪದ ಚಂಡಮಾರುತ ಅಪ್ಪಳಿಸಿದ್ದನ್ನು ಬಿಟ್ಟರೆ, ಯಾವುದೇ ಚಂಡಮಾರುತ ಮುಂಬೈಗೆ ಹಾನಿ ಮಾಡಿರಲಿಲ್ಲ. ಈ ಹಿಂದೆ ತೀವ್ರ ಸ್ವರೂಪದ ಚಂಡಮಾರುತಗಳು ಉಂಟಾಗಿದ್ದರೂ, ಮುಂಬೈಗೆ ಅಪ್ಪಳಿಸಿರಲಿಲ್ಲ. ಮುಂಬೈಗೆ ಚಂಡಮಾರುತ ಎದುರಿಸಿ ರೂಢಿ ಇಲ್ಲ. ಹೀಗಾಗಿ ಅಲ್ಲಿನ ಜನರಿಗೆ ಹೆಚ್ಚು ಭಯ ಕಾಡುತ್ತಿದೆ.

Comments

Leave a Reply

Your email address will not be published. Required fields are marked *