ನಿರ್ಗತಿಕ ಮಕ್ಕಳ ಹಸಿವು ನೀಗಿಸಿದ ಪೊಲೀಸ್- ನೆಟ್ಟಿಗರಿಂದ ಮೆಚ್ಚುಗೆ

ಹೈದರಾಬಾದ್: ನಿರ್ಗತಿಕ ಮಕ್ಕಳಿಬ್ಬರು ಊಟಕ್ಕಾಗಿ ಅಲೆದಾಡುತ್ತಿರುವುದನ್ನು ಕಂಡ ಟ್ರಾಫಿಕ್ ಪೊಲೀಸ್ ಪೇದೆಯೊಬ್ಬರು ಮಕ್ಕಳಿಗೆ ಊಟ ನೀಡಿ ಅವರ ಹಸಿವನ್ನು ನೀಗಿಸುವ ಕೆಲಸ ಮಾಡಿದ್ದಾರೆ.

ಲಾಕ್‍ಡೌನ್ ಇರುವ ಕಾರಣ ಹೈದರಾಬಾದ್‍ನ ಸೋಮಾಜಿಗುಡಾ ಎಂಬ ಪ್ರದೇಶದಲ್ಲಿ ಪಂಜಾಗುಠ ಸಿರುಪಂಗಿ ಮಹೇಶ್ ಕುಮಾರ್ ಗಸ್ತು ತಿರುಗುತ್ತಿದ್ದರು. ಆಗ ಇಬ್ಬರು ಮಕ್ಕಳು ಊಟಕ್ಕಾಗಿ ಅದೇ ಪ್ರದೇಶದಲ್ಲಿದ್ದ ಕಸದಬುಟ್ಟಿಯಲ್ಲಿ ಆಹಾರಕ್ಕಾಗಿ ತಡಕಾಡುತ್ತಿರುವುದನ್ನು ಕಂಡು ವಿಚಾರಿಸಿದಾಗ ಸತ್ಯ ತಿಳಿದು ಬೇಸರಗೊಂಡಿದ್ದಾರೆ.

ಹಸಿವಾಗಿದ್ದ ಕಾರಣ ಅಮೀರ್‌ಪೇಟೆ ಮತ್ತು ಗ್ರೀನ್‍ಲ್ಯಾಂಡ್ ಬಳಿ ಭಿಕ್ಷೆ ಬೇಡಿದ್ದೇವೆ. ಆದರೆ ಊಟ ಮಾತ್ರ ಸಿಕ್ಕಿಲ್ಲ. ಹಾಗಾಗಿ ಊಟಕ್ಕಾಗಿ ಕಸದ ಬುಟ್ಟಿಯನ್ನು ಹುಡುಕಾಡುತ್ತಿದ್ದೇವೆ ಎಂದು ತಮ್ಮ ನೋವನ್ನು ಮಕ್ಕಳು ಹೇಳಿಕೊಂಡಿದ್ದಾರೆ.

ಮಕ್ಕಳ ಮಾತನ್ನು ನೊಂದ ಮಹೇಶ್ ಕುಮಾರ್ ಅವರು ತಮಗಾಗಿ ಬಾಕ್ಸ್‍ನಲ್ಲಿ ತಂದಿದ್ದ ಊಟವನ್ನು ಮಕ್ಕಳಿಗೆ ನೀಡಿದ್ದಾರೆ. ಮಕ್ಕಳಿಗೆ ಎರಡು ತಟ್ಟೆಗಳಲ್ಲಿ ಅವರು ತಂದಿದ್ದ ಅನ್ನ, ಸಾಂಬಾರು, ಚಿಕನ್ ಫ್ರೈ ಹಾಕಿ ಊಟ ಮಾಡುವಂತೆ ಹೇಳಿದ್ದಾರೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪೊಲೀಸರ ಈ ಕಾಯಕ್ಕೆ ಪ್ರಶಂಸನೀಯ ಮಾತುಗಳು ಹರಿದು ಬರುತ್ತಿದೆ. ಈ ವೀಡಿಯೋ ತೆಲಂಗಾಣ ಸ್ಟೇಟ್ ಪೊಲೀಸ್ ಎಂಬ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಆಗಿದೆ.

Comments

Leave a Reply

Your email address will not be published. Required fields are marked *