ನಿಯಮಗಳನ್ನು ಗಾಳಿಗೆ ತೂರಿ ಈಜುಕೊಳ ನಿರ್ಮಿಸಿದ್ರು ರೋಹಿಣಿ ಸಿಂಧೂರಿ – ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಕೆ

ಮೈಸೂರು: ಅರನೆ ನಗರಿಯ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಜಿಲ್ಲಾಧಿಕಾರಿಗಳ ಅಧಿಕೃತ ಸರ್ಕಾರಿ ನಿವಾಸದಲ್ಲಿ ನಿರ್ಮಿಸಿದ್ದ ಈಜುಕೊಳ ವಿಚಾರ ದೊಡ್ಡ ವಿವಾದವಾಗಿತ್ತು. ಈ ಬಗ್ಗೆ ಶಾಸಕ ಸಾರಾ ಮಹೇಶ್ ಸರ್ಕಾರಕ್ಕೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಸರ್ಕಾರ ಮೈಸೂರಿನ ಪ್ರಾದೇಶಿಕ ಆಯುಕ್ತರಿಗೆ ವಿಚಾರಣೆಗೆ ನಿರ್ದೇಶಿಸಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಪ್ರಾದೇಶಿಕ ಆಯುಕ್ತರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದು ವರದಿಯ ವಿವರ ಇಲ್ಲಿದೆ. ಈಜುಕೊಳ ನಿರ್ಮಾಣದಲ್ಲಿ ಆಗಿರುವ ಪ್ರಮುಖ ನ್ಯೂನತೆಗಳ ಪ್ರತ್ಯೇಕ ಪಟ್ಟಿ ಮಾಡಲಾಗಿದೆ.

ನ್ಯೂನತೆಗಳ ಹೀಗಿವೆ..
1. ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದ ಆವರಣದಲ್ಲಿ ಈಜುಕೊಳ ನಿರ್ಮಾಣಕ್ಕೆ ಸಂಬಂಧಪಟ್ಟಂತೆ 32 ಲಕ್ಷ ರೂ. ಗಳಿಗೆ ಅಂದಾಜುಪಟ್ಟಿಯನ್ನು ತಯಾರಿಸಿದ್ದು, ಅಂದಾಜುಪಟ್ಟಿಗೆ ತಾಂತ್ರಿಕ ವರ್ಗದವರಿಂದ ಅಥವಾ ಲೋಕೋಪಯೋಗಿ ಇಲಾಖೆಯಿಂದ ಅನುಮೋದನೆ ಪಡೆದಿಲ್ಲ.
2. ಈಜುಕೊಳದ ನಿರ್ಮಾಣದ ಬಗ್ಗೆ ಯಾವುದೇ ಪೂರ್ವಭಾವಿ ಆಡಳಿತಾತ್ಮಕ ಮಂಜೂರಾತಿ ಪಡೆದಿಲ್ಲ.
3. ಈಜುಕೊಳದ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಯಾವುದೇ ಕಾರ್ಯಾದೇಶ ಇಲ್ಲ.
4. ಕಾಮಗಾರಿ ನಿರ್ವಹಿಸಿದವರ ಒಪ್ಪಂದ ಪತ್ರಗಳು ಇಲ್ಲ.
5. ಪಾರಂಪರಿಕ ಸಂರಕ್ಷಣಾ ಸಮಿತಿಯ ಅನುಮೋದನೆ ಪಡೆದಿಲ್ಲ.

ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದ ಆವರಣದಲ್ಲಿ ಈಜುಕೊಳ ನಿರ್ಮಾಣ ಮಾಡಿರುವುದು ಯಾವುದೇ ಸಾರ್ವಜನಿಕರಿಗೆ ಉಪಯೋಗಿಸಲು ಸಾಧ್ಯವಿರುವುದಿಲ್ಲ. ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದ ಆವರಣದಲ್ಲಿ ಈಜುಕೊಳ ನಿರ್ಮಾಣವು ಯಾವುದೇ ಸಾರ್ವಜನಿಕ ಹಿತಾಸಕ್ತಿ ಹೊಂದಿರುವುದಿಲ್ಲ ಎಂದು ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಇದನ್ನೂ ಓದಿ: ಮೈಸೂರು ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿಗೆ ಸಂಕಷ್ಟ

ವರದಿಯಲ್ಲಿನ ಬೇರೆ ಪ್ರಮುಖ ಅಂಶಗಳು ಹೀಗಿವೆ:
– ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದಲ್ಲಿ ಈಜುಕೊಳ ನಿರ್ಮಾಣವನ್ನು ನಿರ್ಮಿತಿ ಕೇಂದ್ರ, ಮೈಸೂರು ಸಂಸ್ಥೆಯಿಂದ ಮಾಡಿಸಲಾಗಿರುತ್ತದೆ.


– ಈಜುಕೊಳ ನಿರ್ಮಾಣ ಮಾಡುವ ಮುಂಚೆ ಯಾವುದೇ ಸಭೆಯಲ್ಲಿ ಮಂಡಿಸಿ ಪೂರ್ವ ಅನುಮೋದನೆ ಪಡೆದಿರುವುದಿಲ್ಲ.
– ನಿರ್ಮಿತಿ ಕೇಂದ್ರ, ಮೈಸೂರು ಇವರು ಈಜುಕೊಳ ನಿರ್ಮಾಣ ಮಾಡಲು ರೂ.32,55,131-49 ಗಳಿಗೆ ಅಂದಾಜು ಪಟ್ಟಿಯನ್ನು ತಯಾರಿಸಿರುತ್ತಾರೆ.
– ನಿರ್ಮಿತಿ ಕೇಂದ್ರದಿಂದ ಸಲ್ಲಿಸಿರುವ ಬಿಲ್‍ನಂತೆ ಈಜುಕೊಳ ನಿರ್ಮಾಣದ ನಂತರ ಅಂತಿಮವಾಗಿ 28 ಲಕ್ಷ ರೂ. ವೆಚ್ಚವಾಗಿದೆ.
– ಈಜುಕೊಳ ನಿರ್ಮಾಣದ ಕಾಮಗಾರಿ ದಿನಾಂಕ 2020ರ ಡಿಸೆಂಬರ್ 31ರಂದು ಪ್ರಾರಂಭಿಸಿ 202021ರ ಫೆಬ್ರವರಿ 26 ಮುಕ್ತಾಯಗೊಳಿಸಲಾಗಿದೆ. ಇದನ್ನೂ ಓದಿ: ಸಾರಾ ಚೌಟ್ರಿ ಹಳ್ಳದ ಮೇಲೂ ಕಟ್ಟಿಲ್ಲ, ನಾಲೆಯ ಮೇಲೂ ಕಟ್ಟಿಲ್ಲ: ಪ್ರಾದೇಶಿಕ ಆಯುಕ್ತರ ವರದಿಯಲ್ಲಿ ಬಹಿರಂಗ


– ಪ್ರಾಯೋಗಿಕವಾಗಿ ಜಿಲ್ಲಾ ಕೇಂದ್ರದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸರ್ಕಾರಿ ಜಾಗದಲ್ಲಾಗಲೀ ಅಥವಾ ತಾಲೂಕು ಕೇಂದ್ರಗಳಲ್ಲಿನ ಸರ್ಕಾರಿ ಜಾಗಗಳಲ್ಲಾಗಲಿ ನಿರ್ಮಾಣ ಮಾಡದೆ ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದಲ್ಲಿ ಪುರಾಶತ್ವ ಸಂಗ್ರಹಾಲಯಗಳು ಮತ್ತು ಪರಂಪರ ಇಲಾಖೆ, ಮೈಸೂರು ಇಲಾಖೆಯಿಂದ ಅನುಮತಿ ಪಡೆಯದೆ ಈಜುಕೊಳ ನಿರ್ಮಾಣ ಮಾಡಿರುವುದು ಕಂಡುಬರುತ್ತದೆ. ಎಂದು ತಿಳಿಸಲಾಗಿದೆ.

Comments

Leave a Reply

Your email address will not be published. Required fields are marked *