ನಿಮ್ಮ ಸ್ವಾರ್ಥದ ಬಣ ಕಿತ್ತಾಟಕ್ಕೆ ಕಾಂಗ್ರೆಸ್ ಹೆಸ್ರು ಬಳಸಬೇಡಿ: ಸಿಪಿವೈ ಹೇಳಿಕೆಗೆ ತಿರುಗೇಟು

ಬೆಂಗಳೂರು: ನಿಮ್ಮ ಸ್ವಾರ್ಥದ ಬಣ ಕಿತ್ತಾಟಗಳಿಗೆ ಕಾಂಗ್ರೆಸ್ ಹೆಸರು ಬಳಸಬೇಡಿ ಎಂದು ಸಚಿವ ಸಿ.ಪಿ.ಯೋಗೇಶ್ವರ್ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ಸಾಲು ಸಾಲು ಟ್ವೀಟ್‍ಗಳ ಮೂಲಕ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.

ಬಿಜೆಪಿಯಲ್ಲಿ ನಡೆಯುತ್ತಿರುವ ಬಣ ರಾಜಕೀಯವನ್ನು ಮೂರು ಪಾರ್ಟಿಯ ಸರ್ಕಾರ ಎಂದು ಬಿಜೆಪಿಯ ಸಚಿವರೊಬ್ಬರು ಆರೋಪಿಸಿದ್ದಾರೆ. ಕಾಂಗ್ರೆಸ್ ಹೆಸರನ್ನು ನಿಮ್ಮ ಸ್ವಾರ್ಥದ ಬಣ ಕಿತ್ತಾಟಗಳಿಗೆ ಬಳಸಿಕೊಳ್ಳಬೇಡಿ. ರಾಜ್ಯ ಸಾವಿನ ಮನೆಯಂತಾಗಿರುವ ಹೊತ್ತಿನಲ್ಲಿ ಹರಿದ ಬನಿಯನ್‍ನಂತಾಗಿರುವ ನಿಮ್ಮ ಬಿಜೆಪಿ ವರ್ಸಸ್ ಬಿಜೆಪಿ ಕಿತ್ತಾಟವು ರಾಜ್ಯಕ್ಕೆ ಮಾರಕವಾಗಲಿದೆ.

ಮಾನ, ಮರ್ಯಾದೆ, ಲಜ್ಜೆ ಮೂರು ಬಿಟ್ಟಿರುವ ಪಕ್ಷ ಬಿಜೆಪಿ. ಈ ಎಲ್ಲಾ ಕುರ್ಚಿ ಕದನ ನಡೆಸಲೆಂದೇ ಕೊರೊನಾ ಕೇಸ್‍ಗಳನ್ನು ಕಡಿಮೆ ತೋರಿಸಿ ವೇದಿಕೆ ಸಜ್ಜುಗೊಳಿಸಿಕೊಂಡಿದೆ. ವಿಜಯೇಂದ್ರ ಸರ್ವಿಸ್ ಟ್ಯಾಕ್ಸ್ ಲೂಟಿಯನ್ನು ತಮ್ಮದೇ ಪಕ್ಷದವರು ಆರೋಪಿಸುತ್ತಿದ್ದರೂ, “ನಾ ಖಾವೊಂಗ ನಾ ಖಾನೆದುಂಗ” ಪ್ರಧಾನಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕದಿರುವುದು ದುರಂತ.

ಬಿಜೆಪಿ ಆಡಳಿತಕ್ಕೆ ಬಂದಾಗಲೆಲ್ಲ ಜನಪರ ಕೆಲಸ, ಯೋಜನೆಗಳ ಬದಲಿಗೆ ರೆಸಾರ್ಟ್ ರಾಜಕೀಯ, ಆಂತರಿಕ ಕಿತ್ತಾಟ, ಕುರ್ಚಿ ಕದನಗಳೇ ಸದ್ದು ಮಾಡುತ್ತವೆ. ಹಿಂದೆ 3 ಸಿಎಂಗಳ ಬದಲಾವಣೆಯಾಗಿತ್ತು, ಈಗಲೂ ಅದೇ ದಿಕ್ಕಿನಲ್ಲಿ ಸಾಗುತ್ತಿದೆ ಬಿಜೆಪಿ. ಬಿಜೆಪಿ ವರ್ಸಸ್ ಬಿಜೆಪಿ ಕಿತ್ತಾಟ ಆಡಳಿತದ ಮೇಲೆ ದುಷ್ಪರಿಣಾಮ ಬೀರಿ ರಾಜ್ಯ ಇನ್ನಷ್ಟು ಅಧೋಗತಿಗೆ ಇಳಿಯಲಿದೆ.

ಬಿಜೆಪಿ ಮಾಡುತ್ತಿರುವ ಚಟುವಟಿಕೆ ಎರಡೇ! ಒಂದು “ಮಾನವ ಮುಕ್ತ ಕರ್ನಾಟಕ” ಮತ್ತೊಂದು “ಯಡಿಯೂರಪ್ಪ ಮುಕ್ತ ಬಿಜೆಪಿ”! ಇವೆರಡರ ಹೊರತಾಗಿ ಬಿಜೆಪಿ ಚಿಂತಿಸುತ್ತಲೇ ಇಲ್ಲ. ಜನರ ಜೀವ ಉಳಿಸುವ ಗಾಂಭೀರ್ಯತೆ ಇಲ್ಲವೇ ಇಲ್ಲ.

ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿರುವುದು, ಉಲ್ಬಣಿಸುತ್ತಿರುವ ಶಿಲೀಂದ್ರ ರೋಗದ ಬಗ್ಗೆ ಚರ್ಚಿಸಲಲ್ಲ. ಜನತೆಗೆ ಆರ್ಥಿಕ ನೆರವು ನೀಡುವುದಕ್ಕಲ್ಲ. ಕೇಂದ್ರದ ಅನ್ಯಾಯ ಪ್ರಶ್ನಿಸಲಲ್ಲ, ಕರೋನಾ ನಿಯಂತ್ರಣದ ಬಗ್ಗೆಚರ್ಚಿಸಲಲ್ಲ. ಬದಲಾಗಿ ಬಿಎಸ್ ವೈ ಮುಕ್ತ ಬಿಜೆಪಿ ಮಾಡಲು. ಇಂತಹ ಅಯೋಗ್ಯ ಪಕ್ಷ ಅಧಿಕಾರದಲ್ಲಿರುವುದು ರಾಜ್ಯದ ದುರ್ದೈವ.

ಸಿಪಿವೈ ಹೇಳಿದ್ದೇನು?:
ಇದು ಶುದ್ಧ ಬಿಜೆಪಿ ಸರ್ಕಾರ ಅಲ್ಲ. ಮೂರು ಗುಂಪಿನ ಸರ್ಕಾರ. ರಾಮನಗರದಲ್ಲೇ ನನ್ನ ಮಾತು ನಡೀತಿಲ್ಲ. ಯಡಿಯೂರಪ್ಪ ಜೆಡಿಎಸ್, ಕಾಂಗ್ರೆಸ್ ಜೊತೆ ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್ ನಲ್ಲಿ ತೊಡಗಿದ್ದಾರೆ ಎಂದು ಸಚಿವ ಸಿ.ಪಿ.ಯೋಗೇಶ್ವರ್ ಆಪಾದಿಸಿದ್ದಾರೆ. ನನ್ನ ಇಲಾಖೆಯಲ್ಲಿ ಬಿವೈ ವಿಜಯೇಂದ್ರ ಹಸ್ತಕ್ಷೇಪ ಮಾಡ್ತಿದ್ದಾರೆ ಎಂದು ಪರೋಕ್ಷವಾಗಿ ದೂರಿದ್ದಾರೆ. ಇದನ್ನೂ ಓದಿ: ನಾಯಕತ್ವ ಬದಲಾವಣೆಯನ್ನು ಪರೋಕ್ಷವಾಗಿ ಒಪ್ಪಿಕೊಂಡ ಸಚಿವ ಯೋಗೇಶ್ವರ್

ಇಷ್ಟು ದಿನ ಬೂದಿ ಮುಚ್ಚಿದ ಕೆಂಡದಂತಿದ್ದ ಬಿಜೆಪಿಯಲ್ಲಿನ ಭಿನ್ನಮತ ಇದೀಗ ಧಗಧಗ ಎನ್ನಲು ಶುರುವಾಗಿದೆ. ಸಿಎಂ ಯಡಿಯೂರಪ್ಪ ವಿರುದ್ಧ ನೇರಾನೇರ ಸಚಿವ ಸಿಪಿ ಯೋಗೇಶ್ವರ್ ಕದನಕ್ಕೆ ಇಳಿದಂತೆ ಕಾಣುತ್ತಿದೆ. ಸಿಎಂ ಚೇಂಜ್ ಮಾಡಲು ಮೊನ್ನೆ ನಡೆಸಿದ್ದ ದೆಹಲಿ ದಂಡಯಾತ್ರೆ ಫೇಲ್ ಆದ್ರೂ ಪೊಲಿಟಿಕಲ್ ಸೈನಿಕ ಕುಗ್ಗಿದಂತೆ ಕಂಡಿಲ್ಲ. ಬದಲಾಗಿ ಇನ್ನಷ್ಟು ಸಿಡಿದೆದ್ದಿದ್ದಾರೆ. ಸಿಎಂ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬ್ಲಾಕ್‍ಮೇಲ್ ಮಾಡುವವರನ್ನು ಮಂತ್ರಿ ಮಾಡಬೇಡಿ ಎಂದಿದ್ದೆವು- ಯೋಗೆಶ್ವರ್‌ಗೆ ರಾಜೂಗೌಡ ಟಾಂಗ್

Comments

Leave a Reply

Your email address will not be published. Required fields are marked *