ನಿಮ್ಮ ಪ್ರೀತಿಯೇ ನನಗೆ ಆಸರೆ, ರಕ್ಷಾಕವಚ – ಅಭಿಮಾನಿಗಳ ಬಗ್ಗೆ ಮೇಘನಾ ಮಾತು

– ನಾನು ಅತ್ತಾಗ ನೀವು ಅತ್ತಿದ್ದೀರಿ

ಬೆಂಗಳೂರು: ನಿಮ್ಮ ಪ್ರೀತಿಯೇ ನನಗೆ ಆಸರೆ, ರಕ್ಷಾಕವಚ ಎಂದು ಟ್ವೀಟ್ ಮಾಡುವ ಮೂಲಕ ದಿವಂಗತ ಚಿರಂಜೀವಿ ಸರ್ಜಾ ಅವರ ಪತ್ನಿ ಹಾಗೂ ನಟಿ ಮೇಘನಾ ರಾಜ್ ಅವರು ತಮ್ಮ ಕಷ್ಟದ ದಿನಗಳಲ್ಲಿ ಜೊತೆಗಿದ್ದ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಇದೇ ಜೂನ್ 7ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದ ತನ್ನ ಪತಿ ಚಿರು ನೆನಪಿನಲ್ಲಿ ಗುರುವಾರ ಅವರ ಬಗ್ಗೆ ಟ್ವೀಟ್ ಮಾಡಿದ್ದ ಮೇಘನಾ, ಇಂದು ಕಷ್ಟದ ಕಾಲದಲ್ಲಿ ಸ್ಪಂದಿಸಿದ, ಆಕೆಯ ನೋವಿನಲ್ಲಿ ಜೊತೆಗೆ ಇದ್ದ ಅಭಿಮಾನಿಗಳ ಬಗ್ಗೆ ಟ್ವೀಟ್ ಮಾಡಿದ್ದಾರೆ. ಈ ಮೂಲಕ ನಾನು ಅತ್ತಾಗ ನೀವು ಅತ್ತಿದ್ದೀರಾ ನಿಮಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಅಭಿಮಾನಿಗಳಿಗಾಗಿ ಟ್ವೀಟ್ ಮಾಡಿರುವ ಮೇಘನಾ, ಕಳೆದ ಕೆಲವು ದಿನಗಳು ನನ್ನ ಜೀವನದಲ್ಲಿ ಅತಿ ಕಠಿಣ ಹಾಗೂ ಆಘಾತಕರ. ಕಲ್ಪನೆಗೂ ಮೀರಿ ಅದ್ಭುತವಾಗಿದ್ದ ನನ್ನ ಸುಂದರ ಲೋಕ ಅಲ್ಲೋಲ ಕಲ್ಲೋಲ ಆದಾಗ, ಇನ್ನು ನನಗಾಗಿ ಏನೂ ಇಲ್ಲವೆಂದು ಅಂದುಕೊಂಡಾಗ ಕಗ್ಗತ್ತಲೆಯಲ್ಲಿ ಆಶಾದೀಪದ ಬೆಳಕಿನಂತೆ ಕಂಡಿದ್ದು, ನನ್ನ ಕುಟುಂಬ, ಸ್ನೇಹಿತರು, ಚಿತ್ರರಂಗದ ಸಹಪಾಠಿಗಳು. ಎಲ್ಲರಿಗಿಂತ ಹೆಚ್ಚಾಗಿ ಅಭಿಮಾನಿಗಳು ತೋರಿದ ಪ್ರೀತಿ, ವಾತ್ಸಲ್ಯ, ಮಮತೆ. ನಿಮ್ಮ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಿಮ್ಮ ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸಲು ಒಂದು ಜನುಮ ಸಾಲದು. ಆ ನಿಮ್ಮ ಪ್ರೀತಿಯೇ ನನಗೆ ಆಸರೆ ರಕ್ಷಾಕವಚ ಎಂದು ಬರೆದುಕೊಂಡಿದ್ದಾರೆ.

ಇದರ ಜೊತೆಗೆ ನಾನು ಅತ್ತಾಗ ನೀವು ನನ್ನೊಂದಿಗೆ ಕಣ್ಣೀರು ಹಾಕಿದ್ದೀರಿ, ನನ್ನ ನೋವನ್ನು ನೀವು ಉಂಡಿದ್ದೀರಿ, ನನ್ನಷ್ಟೇ ಚಿರು ಅವರನ್ನು ಪ್ರೀತಿಸಿದ್ದೀರಿ. ನಿಮ್ಮ ಆ ಪ್ರೀತಿಗೆ ನಾನು ಚಿರಋಣಿ. ಇಂತಹ ನೋವಿನ ಸಮಯದಲ್ಲಿ ನಿಮ್ಮ ಅಭಿಮಾನ, ಚಿತ್ರರಂಗದ ಬೆಂಬಲ ಎಲ್ಲವೂ ಚಿರು ಸಂಪಾದಿಸಿದ ಪ್ರೀತಿಯ ರಾಶಿಯ ಗುರುತು. ನಿಮ್ಮ ಅಭಿಮಾನ ಗೆದ್ದ ಅವರಿಗಿಂತ ಸಿರಿವಂತ ಇನ್ಯಾರು ಇಲ್ಲ. ಚಿರು ಅವರನ್ನು ನಿಮ್ಮ ಮನೆ ಮಗನಂತೆ ಭಾವಿಸಿ ಇದ್ದಷ್ಟು ದಿನ ರಾಜನಂತೆ ಬದುಕ್ಕಿದ್ದ ಚಿರು ಅವರನ್ನು ಸಾಲು ಸಾಲಾಗಿ ಬಂದು ಪ್ರೀತಿಯಿಂದ ಮಹಾರಾಜನಂತೆ ಕಳುಹಿಸಿಕೊಟ್ಟ ನಿಮಗೆಲ್ಲರಿಗೂ ನನ್ನ ನಮಸ್ಕಾರಗಳು. ಆ ಮಹಾರಾಜ ನನ್ನ ಮಡಿಲಿಗೆ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ತಿರುಗಿ ಬರುವನು ಎಂದು ಹೇಳಿದ್ದಾರೆ.

ಗುರುವಾರ ಚಿರು ಬಗ್ಗೆ ಬರೆದುಕೊಂಡಿದ್ದ ಮೇಘನಾ, ನಾನು ಪದೇ ಪದೇ ಪ್ರಯತ್ನ ಮಾಡುತ್ತಲೇ ಇದ್ದೇನೆ. ಆದರೆ ನಿನ್ನ ಬಗ್ಗೆ ಹೇಳಲು ಪದಗಳು ಸಾಲುತ್ತಿಲ್ಲ. ಪ್ರಪಂಚದಲ್ಲಿರುವ ಎಲ್ಲ ಪದಗಳು ನೀನು. ನನಗೆ ಏನಾಗಬೇಕು ಎಂಬುದನ್ನು ವಿವರಿಸಲು ಸಾಕಾಗುವುದಿಲ್ಲ. ನನ್ನ ಸ್ನೇಹಿತ, ನನ್ನ ಪ್ರಿಯತಮ, ನನ್ನ ಸಂಗಾತಿ, ನನ್ನ ಮಗು, ನನ್ನ ಆತ್ಮವಿಶ್ವಾಸ, ನನ್ನ ಪತಿ ಇದೆಲ್ಲದಕ್ಕಿಂತ ಮಿಗಿಲು ನೀನು. ನೀನು ನನ್ನ ಆತ್ಮದ ಒಂದು ಭಾಗ ಎಂದು ಭಾವನಾತ್ಮಕವಾಗಿ ಹೇಳಿದ್ದರು.

ಜೂನ್ 7ರಂದು ಮಧ್ಯಾಹ್ನದವರೆಗೂ ಚೆನ್ನಾಗಿದ್ದ ಚಿರು, ನಂತರ ಸುಮಾರು 3.48ರ ಸಮಯಕ್ಕೆ ಹೃದಯಾಘಾತದಿಂದ ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇಳಿವಯಸ್ಸಿನಲ್ಲಿ ಬಾರದ ಲೋಕಕ್ಕೆ ಬಹಬೇಗ ತೆರಳಿದ ಚಿರುಗಾಗಿ ಇಡೀ ಕರುನಾಡೇ ಕಂಬನಿ ಮಿಡಿದಿತ್ತು. ಚಿರು ಅವರು ಅಂತ್ಯಕ್ರಿಯೆ ಕನಕಪುರ ರಸ್ತೆಯಲ್ಲಿ ಇರುವ ತಮ್ಮ ಧ್ರವ ಸರ್ಜಾ ಅವರ ತೋಟದ ಮನೆಯಲ್ಲಿ ನಡೆದಿತ್ತು.

Comments

Leave a Reply

Your email address will not be published. Required fields are marked *