ನಿಮ್ಮನ್ನ ಬಿಡಲ್ಲ: ಹಣ ಗಳಿಕೆಗೆ ಮುಂದಾದ ಆಸ್ಪತ್ರೆಗಳಿಗೆ ಕೇಜ್ರಿವಾಲ್ ಖಡಕ್ ವಾರ್ನಿಂಗ್

ನವದೆಹಲಿ: ನಿಮ್ಮನ್ನ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೊರೊನಾ ಸಂಕಷ್ಟದಲ್ಲೂ ಹಣ ಗಳಿಕೆಗೆ ಮುಂದಾದ ಆಸ್ಪತ್ರೆಗಳಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ದೇಶಾದ್ಯಂತ ಕೊರೊನಾ ಸೋಂಕಿತರ ಹೆಚ್ಚಾದಂತೆ ಆಸ್ಪತ್ರೆಗಳು ರೋಗಿಗಳಿಂದ ಹೆಚ್ಚು ಹಣವನ್ನು ಪಡೆಯುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಇಂತಹದ್ದೇ ಪರಿಸ್ಥಿತಿ ದೆಹಲಿಯಲ್ಲೂ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಕೇಜ್ರಿವಾಲ್ ಆಸ್ಪತ್ರೆಗಳ ವಿರುದ್ಧ ಕಿಡಿಕಾರಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ನಿಮ್ಮ ಆಸ್ಪತ್ರೆಗಳನ್ನು ತೆರೆಯಲು ನಾವು ಅವಕಾಶ ಕೊಟ್ಟಿದ್ದು ಹಣ ಸಂಪಾದಿಸುವುದಕ್ಕಾಗಿ ಅಲ್ಲ. ದೆಹಲಿಯ ಜನರಿಗೆ ಸೇವೆ ಸಲ್ಲಿಸಲು. ಕೊರೊನಾ ಅಟ್ಟಹಾಸದ ಸಮಯದಲ್ಲಿ ಹೆಚ್ಚಿನ ಆಸ್ಪತ್ರೆಗಳು ರೋಗಿಗಳಿಗೆ ಸಕಾರಾತ್ಮಕ ಮನೋಭಾವದಿಂದ ಚಿಕಿತ್ಸೆ ನೀಡುತ್ತಿವೆ. ಆದರೆ 3-4 ಆಸ್ಪತ್ರೆಗಳು ಇತರ ಪಕ್ಷಗಳ ಖಾತೆಗಳಿಗೆ ಅನುಕೂಲಕರವಾಗಿವೆ. ಕೆಲವು ಆಸ್ಪತ್ರೆಗಳು ಕೋವಿಡ್-19 ರೋಗಿಗಳಿಗೆ ಪ್ರವೇಶವನ್ನು ನಿರಾಕರಿಸುತ್ತಿವೆ. ಇತರ ಪಕ್ಷಗಳಿಂದ ಪ್ರಭಾವವನ್ನು ಬಳಸಿಕೊಂಡು ಹಣ ಗಳಿಸುವ ಸಾಧ್ಯವಾಗುತ್ತದೆ ಎಂದು ಭಾವಿಸಿದ್ದಾರೆ. ಅಂತಹ ಆಸ್ಪತ್ರೆಗಳನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ” ಎಂದು ಗುಡುಗಿದ್ದಾರೆ.

“ನಗರದ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆಯಿಲ್ಲ. ಕೊರೊನಾ ರೋಗಿಗಳ ಚಿಕಿತ್ಸೆಗೆ ಒಟ್ಟು 8,645 ಬೆಡ್‍ಗಳು ಲಭ್ಯವಿದ್ದು, ಅದರಲ್ಲಿ 4,038 ಮಾತ್ರ ಭರ್ತಿಯಾಗಿವೆ. ಉಳಿದಂತೆ 4,607 ಬೆಡ್‍ಗಳು ಖಾಲಿ ಇವೆ. ಇದು ಕೇವಲ ಅಂಕಿಗಳಲ್ಲ, ಸ್ಪಷ್ಟ ಮಾಹಿತಿ. ನಗರದಲ್ಲಿ ಸಾಕಷ್ಟು ಹಾಸಿಗೆಗಳು ಲಭ್ಯವಿದೆ. ಆದರೆ ಕೆಲವರು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಹೇಳಿದರು.

ಆಸ್ಪತ್ರೆಗಳ ಹಣ ಗಳಿಕೆಯ ಪ್ರವೃತ್ತಿಯನ್ನು ನಿಗ್ರಹಿಸಲು ಪ್ರತಿ ಆಸ್ಪತ್ರೆಯಲ್ಲಿ ದೆಹಲಿ ಸರ್ಕಾರದ ವೈದ್ಯರನ್ನು ನಿಯೋಜಿಸುತ್ತಿದ್ದೇವೆ. ಅವರು ಅಗತ್ಯಗಳ ಬಗ್ಗೆ ಮಾಹಿತಿ ನೀಡುವ ಜವಾಬ್ದಾರಿ ಹೊಂದಿರುತ್ತಾರೆ. ಆ್ಯಪ್‍ನಲ್ಲಿ ಬಿಡುಗಡೆ ಮಾಡಿ ದೆಹಲಿ ಕೊರೊನಾ ಆಸ್ಪತ್ರೆಯಲ್ಲಿ ಹಾಸಿಗೆಗಳ ಲಭ್ಯತೆಯ ಬಗ್ಗೆ ಸರಿಯಾದ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *