ಚಿಕ್ಕಮಗಳೂರು: ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್ ಧರ್ಮೇಗೌಡ ಅವರು ಆತ್ಮಹತ್ಯೆಗೆ ಶರಣಾಗಿದ್ದು, ನಿನ್ನೆಯಷ್ಟೇ ಅವರು ಹೊಸ ಮನೆ ನಿರ್ಮಾಣ ಮಾಡಲು ಗುದ್ದಲಿ ಪೂಜೆ ನೆರವೇರಿಸಿದ್ದರು.
ಧರ್ಮೇಗೌಡರ ಮನೆಯಲ್ಲಿ ನಿನ್ನೆ ಸಂತೋಷ, ಇಂದು ನೀರವ ಮೌನ ಆವರಿಸಿದೆ. ತಮ್ಮ ಫಾರಂಹೌಸ್ ನಲ್ಲಿ ಮತ್ತೊಂದು ಮನೆ ನಿರ್ಮಾಣ ಮಾಡುವ ಕನಸು ಕಂಡಿದ್ದ ಧರ್ಮೇಗೌಡರು, ಹೊಸ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ಕೂಡ ನೆರವೇರಿಸಿದ್ದರು. ಬೆಳಗ್ಗೆಯಿಂದಲೂ ಲವಲವಿಕೆಯಿಂದಲೇ ಇದ್ದ ಅವರು ಪೂಜೆ ಮುಗಿಸಿ, ಚಿಕ್ಕಮಗಳೂರು ಕಾರ್ಯಕ್ರಮ ಮುಗಿಸಿ ಸಂಜೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೂಜೆ ನೆರವೇರಿಸಿದ್ದ ಗುದ್ದಲಿ, ಪಿಕಾಸಿ ಇನ್ನೂ ಅಲ್ಲೇ ಬಿದ್ದಿವೆ.

ಧರ್ಮೇಗೌಡರ ತೋಟದ ರೈಟರ್ ಮಾತನಾಡಿ, ಕಳೆದ ಮೂರು ದಿನಗಳಿಂದ ಧರ್ಮೇಗೌಡ ಅವರು ತೊಟದ ಮನೆಯಲ್ಲಿಯೇ ಇದ್ದರು. ಮಧ್ಯಾಹ್ನದವರೆಗೂ ತೋಟದಲ್ಲೇ ಇದ್ದರು. ಬೆಳಗ್ಗೆ ವಾಕ್ ಮಾಡಿದ್ರು, ತೋಟದ ಕೆಲಸ ಹೇಳಿದ್ರು. ಮಧ್ಯಾಹ್ನದ ಬಳಿಕ ಎಲ್ಲಿಗೆ ಹೋದರು ಅನ್ನೋ ಬಗ್ಗೆ ಮಾಹಿತಿ ಇಲ್ಲ. ಕಾಫಿತೋಟ, ತೆಂಗು, ಅಡಿಕೆ ತೋಟ ಅಂದ್ರೆ ಅವರಿಗೆ ಬಹಳ ಪ್ರೀತಿ. ಪ್ರತಿಯೊಂದನ್ನೂ ಚೆನ್ನಾಗಿ ಗಮನಿಸುತ್ತಿದ್ದರು. ನಮ್ಮನ್ನ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಅವರನ್ನು ಕಳೆದುಕೊಂಡು ತುಂಬಾ ನೋವಾಗಿದೆ ಎಂದು ಕಣ್ಣೀರು ಹಾಕಿದ್ದಾರೆ.

ನಡೆದಿದ್ದೇನು..?
ಎಸ್.ಎಲ್ ಧರ್ಮೇಗೌಡ ಅವರು ನಿನ್ನೆ ಸಂಜೆ 6.30ರ ಸುಮಾರಿಗೆ ಗುಣಸಾಗರಕ್ಕೆ ಆಗಮಿಸಿದ್ದರು. ಸಖರಾಯಪಟ್ಟಣದ ಮನೆಯಿಂದ ಡ್ರೈವರ್ ಜೊತೆ ಕಾರಿನಲ್ಲಿ ಬಂದಿದ್ದ ಅವರು, ರೈಲ್ವೆ ಟ್ರ್ಯಾಕ್ ಬಳಿ ಕಾರನ್ನ ನಿಲ್ಲಿಸಲು ಡ್ರೈವರಿಗೆ ಸೂಚನೆ ನೀಡಿದ್ದಾರೆ. ಇತ್ತ ರೈಲ್ವೆ ಹಳಿಯತ್ತ ಬರುವಾಗ ಹಳ್ಳಿಗರನ್ನ ಮಾತನಾಡಿಸಿ ಬಂದಿದ್ದರು. ಅಲ್ಲದೆ ನನಗೆ ಒಬ್ಬರ ಜೊತೆ ಖಾಸಗಿಯಾಗಿ ಮಾತನಾಡಬೇಕು, ನೀನು ಹೋಗು ಅಂತ ಚಾಲಕನನ್ನು ಕಳುಹಿಸಿದ್ದಾರೆ. ಆ ಬಳಿಕ ಕಡೂರಿನ ವ್ಯಕ್ತಿಯೊಬ್ಬರಿಗೆ ಫೋನ್ ಮಾಡಿ ಜನಶತಾಬ್ದಿ ರೈಲು ಬರುವ ಸಮಯವನ್ನು ವಿಚಾರಿಸಿದ್ದಾರೆ. ನಂತರ ತಮ್ಮ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದರು.

ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಬಂದ ರೈಲಿಗೆ ತಲೆಕೊಟ್ಟು ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯಿಂದ ಧರ್ಮೇಗೌಡ ಅವರ ಮೃತದೇಹ ಛಿದ್ರಗೊಂಡಿದ್ದು, ಸುಮಾರು 100 ಮೀಟರ್ ದೂರದಲ್ಲಿ ಕೈ ಪತ್ತೆಯಾಗಿದೆ. ಪರಿಷತ್‍ನಲ್ಲಿ ನಡೆದ ಗಲಾಟೆಯಿಂದ ಮನಸ್ಸಿಗೆ ನೋವಾಗಿದೆ. ಮನೆಯಲ್ಲಿನ ಆಸ್ತಿ ವಿಚಾರ, ಹಣಕಾಸು ಸಂಬಂಧ ಡೆತ್‍ನೋಟ್‍ನಲ್ಲಿ ಬರೆದಿದ್ದಾರೆ. ಅಲ್ಲದೆ ಪತ್ನಿ ಮಮತಾ, ಮಗ, ಮಗಳಲ್ಲಿ ಕ್ಷಮೆ ಕೂಡ ಕೇಳಿದ್ದು, ಮನೆಯನ್ನು ಪೂರ್ಣಗೊಳಿಸುವಂತೆ ಸೂಚನೆ ಕೂಡ ನೀಡಿದ್ದಾರೆ.

Leave a Reply