ನಿಗದಿತ ಅವಧಿಯೊಳಗೆ ಬೆಳ್ಳಂದೂರು ಕೆರೆ ಹೂಳೆತ್ತುವ ಕಾರ್ಯ ಪೂರ್ಣ: ಎಸ್.ಆರ್.ವಿಶ್ವನಾಥ್

ಬೆಂಗಳೂರು: ಬೆಳ್ಳಂದೂರು ಕೆರೆಯಲ್ಲಿ ತುಂಬಿರುವ ಹೂಳೆತ್ತುವ ಕಾರ್ಯವನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕೆಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಮಂಗಳವಾರ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಮತ್ತು ಬಿಡಿಎ ಆಯುಕ್ತ ರಾಜೇಶ್ ಗೌಡ ಅವರೊಂದಿಗೆ ಬೆಳ್ಳಂದೂರು ಮತ್ತು ವರ್ತೂರು ಕೆರೆಯ ಹೂಳೆತ್ತುವ ಕಾಮಗಾರಿ ಹಾಗೂ ದೊಡ್ಡಬನಹಳ್ಳಿ ಮತ್ತು ಗುಂಜೂರು ವಸತಿ ಸಮುಚ್ಛಯಗಳಿಗೆ ಭೇಟಿ ನೀಡಿದ ನಂತರ ವಿಶ್ವನಾಥ್ ಈ ವಿಷಯ ತಿಳಿಸಿದರು. ಬೆಳ್ಳಂದೂರು ಕೆರೆಯ ಹೂಳೆತ್ತುವುದು ಮತ್ತು ಇನ್ನಿತರೆ ಕಾಮಗಾರಿಗಳಿಗೆಂದು 100 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗುತ್ತಿದ್ದು, ಇನ್ನೂ ಹೆಚ್ಚು ಯಂತ್ರೋಪಕರಣಗಳು ಮತ್ತು ಮಾನವ ಸಂಪನ್ಮೂಲವನ್ನು ಬಳಸಿಕೊಂಡು ನಿಗದಿತ ಸಮಯದೊಳಗೆ ಅಂದರೆ 2022 ರ ನವೆಂಬರ್ ಒಳಗೆ ಕಾಮಗಾರಿಯನ್ನು ಹಾಗೂ ವರ್ತೂರು ಕೆರೆಯ ಹೂಳೆತ್ತುವ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಬಿಡಿಎ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ನಿರ್ದೇಶನ ನೀಡಿದರು.

ಎಲ್ಲಾ ಅಪಾರ್ಟ್ ಮೆಂಟ್ ಗಳಿಗೆ ಓಪನ್ ಜಿಮ್:
ದೊಡ್ಡಬನಹಳ್ಳಿ ಬಿಡಿಎ ವಸತಿ ಸಂಕೀರ್ಣಗಳಿಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳಿಂದ ಅಹವಾಲುಗಳನ್ನು ಸ್ವೀಕರಿಸಿದ ವಿಶ್ವನಾಥ್ ಅವರು, ಕೂಡಲೇ ವಸತಿ ಸಂಕೀರ್ಣದಲ್ಲಿರುವ ಸಮಸ್ಯೆಗಳನ್ನು ನಿವಾರಣೆ ಮಾಡಲು ಕ್ರಮ ಕೈಗೊಳ್ಳಬೇಕು ಮತ್ತು ನಿವಾಸಿಗಳ ಸಂಘಕ್ಕೆ ಕಚೇರಿಯನ್ನು ನಿರ್ಮಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಿಡಿಎ ನಿರ್ಮಾಣ ಮಾಡಿರುವ ಬಹುತೇಕ ಎಲ್ಲಾ ಅಪಾರ್ಟ್ ಮೆಂಟ್ ಗಳಿಗೆ ಓಪನ್ ಜಿಮ್ ಮತ್ತು ಮಕ್ಕಳ ಆಟೋಟಗಳಿಗೆ ಪ್ರತ್ಯೇಕ ಸ್ಥಳದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಓಪನ್ ಜಿಮ್ ನಲ್ಲಿ ಸೌಲಭ್ಯಗಳನ್ನು ಕಲ್ಪಿಸಲು ಸದ್ಯದಲ್ಲಿಯೇ ಪ್ರಾಧಿಕಾರ ಅನುಮೋದನೆ ನೀಡಲಿದೆ ಎಂದು ಭರವಸೆ ನೀಡಿದರು.

ಗುಂಜೂರು ಸಮಸ್ಯೆ ನಿವಾರಣೆಗೆ ಆಗಸ್ಟ್ 15 ಗಡುವು:
ಇನ್ನು ಗುಂಜೂರು ವಸತಿ ಸಂಕೀರ್ಣದಲ್ಲಿ ವಾಸವಾಗಿರುವ ನಿವಾಸಿಗಳ ಅಹವಾಲುಗಳನ್ನು ಸ್ವೀಕರಿಸಿದ ವಿಶ್ವನಾಥ್ ಅವರು, ಕುಡಿಯುವ ನೀರು ಸಮಸ್ಯೆ ಪರಿಹಾರಕ್ಕೆ ಕೂಡಲೇ ಎರಡು ಬೋರ್ ವೆಲ್ ಗಳನ್ನು ಹಾಕಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಶಾಶ್ವತ ವಿದ್ಯುತ್ ಸಂಪರ್ಕ, ಕಸ ವಿಲೇವಾರಿ, ಕಾಂಪೌಂಡ್ ನಿರ್ಮಾಣ ಸೇರಿದಂತೆ ಇನ್ನಿತರೆ ಕಾಮಗಾರಿಗಳನ್ನು ಆಗಸ್ಟ್ 15 ರೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಗಡುವು ವಿಧಿಸಿದರು. ಇದೇ ವೇಳೆ, ಕಾಮಗಾರಿಯಲ್ಲಿ ವಿಳಂಬ ಮತ್ತು ಲೋಪಗಳು ಕಂಡು ಬಂದರೆ ಅಂತಹ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Comments

Leave a Reply

Your email address will not be published. Required fields are marked *