ನಾವು ಯಾವ ಅಮಾಯಕರನ್ನೂ ಅರೆಸ್ಟ್ ಮಾಡಿಲ್ಲ – ಕಾಂಗ್ರೆಸ್ ನಾಯಕರಿಗೆ ಕಮಿಷನರ್ ಕಮಲ್‍ಪಂತ್ ತಿರುಗೇಟು

ಬೆಂಗಳೂರು: ನಾವು ಯಾವ ಅಮಾಯಕರನ್ನೂ ಅರೆಸ್ಟ್ ಮಾಡಿಲ್ಲ ಎಂದು ಪೊಲೀಸ್ ಆಯುಕ್ತ ಕಮಲ್‍ ಪಂತ್ ಹೇಳುವ ಮೂಲಕ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಪುಂಡರು ಅಮಾಯಕರು, ಮುಗ್ಧರಂತೆ – ಕೈ ನಾಯಕರಿಗೆ ‘ಪಬ್ಲಿಕ್’ ಪ್ರಶ್ನೆ

ಡಿಜೆ ಹಳ್ಳಿ ಪೊಲೀಸ್ ಠಾಣೆಯ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಮಲ್‍ ಪಂತ್, ಇವತ್ತು ಕರ್ಫ್ಯೂ ತೆರವು ಆದಮೇಲೆ ಯಾವ ಪರಿಸ್ಥಿತಿ ಇದೆ ಅನ್ನೋದನ್ನು ನೋಡೋಕೆ ಬಂದಿದ್ದೆ. ತನಿಖೆ ಯಾವ ರೀತಿ ನಡೆಯುತ್ತಿದೆ. ಮುಂದೆ ಏನು ಮಾಡಬೇಕು ಅನ್ನೋದನ್ನು ಚರ್ಚೆ ಮಾಡಿದ್ದೀವಿ. ನಮಗೆ ಯಾವುದೇ ರೀತಿಯ ಒತ್ತಡ ಇಲ್ಲ ತನಿಖೆ ಸಮಯದಲ್ಲಿ ಯಾವುದೇ ಹಸ್ತಕ್ಷೇಪ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.

ಶಾಂತಿ ಸಭೆಗಳು ಮಾಡುತ್ತಿದ್ದೀವಿ. ತನಿಖೆ ಸಮಯ ಆಗಿರುವ ಕಾರಣ ಕೆಲ ಮಾಹಿತಿಗಳನ್ನು ಹಂಚಿಕೊಳ್ಳೋಕೆ ಆಗಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ತಿಳಿಸುತ್ತೀವಿ. ನಾವು ಯಾವ ಅಮಾಯಕರನ್ನು ಅರೆಸ್ಟ್ ಮಾಡಿಲ್ಲ. ಯಾರೇ ಬಂದರೂ ಸೂಕ್ತ ಮಾಹಿತಿ ಕೊಡುತ್ತೀವಿ. ನಾವು ಕಾನೂನು ಪ್ರಕಾರ ಏನು ಮಾಡಬೇಕು ಅದನ್ನು ಮಾಡುತ್ತೀವಿ ಎಂದು ಕಮಲ್‍ ಪಂತ್ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ಕಮಲ್‍ ಪಂತ್ ಭೇಟಿ ನೀಡಿದ್ದು, ಗಲಭೆ ಸಂಬಂಧ ಇಲ್ಲಿವರೆಗಿನ ಮಾಹಿತಿ ಕುರಿತು ಅಧಿಕಾರಿಗಳ ಚರ್ಚೆ ನಡೆಸಿದ್ದಾರೆ. ಗಲಭೆಯಲ್ಲಿ ವಿಚಾರಣೆ ವೇಳೆ ಯಾರೆಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಇವರ ಹೇಳಿಕೆಗಳು, ಕೆಲ ಮಹತ್ವದ ದಾಖಲೆಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ. ಈಗಾಗಲೇ ಇಬ್ಬರು ಕಾರ್ಪೊರೇಟರ್‌ಗಳು, ಸ್ಥಳೀಯ ಜೆಡಿಎಸ್ ಮುಖಂಡ ವಾಜೀದ್‍ನನ್ನ ವಿಚಾರಣೆ ನಡೆಸಿದ್ದಾರೆ. ಸದ್ಯಕ್ಕೆ ಪೊಲೀಸರು ಘಟನೆಯಲ್ಲಿ ಭಾಗಿಯಾದ ಕೆಲ ರೌಡಿಶೀಟರ್‌ಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. ಈ ಎಲ್ಲ ತನಿಖೆಯ ಸಂಬಂಧ ಪೊಲೀಸ್ ಠಾಣೆಯಲ್ಲಿ ಕಮಲ್‍ ಪಂತ್ ಮಾಹಿತಿ ಕಲೆಹಾಕಲಿದ್ದಾರೆ.

Comments

Leave a Reply

Your email address will not be published. Required fields are marked *