ನಾಳೆ ಪ್ರೇಕ್ಷಕರ ಎದುರಿಗೆ ರಾಬರ್ಟ್ ಎಂಟ್ರಿ

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ರಾಬರ್ಟ್ ಸಿನಿಮಾ ನಾಳೆ ರಾಜ್ಯಾದ್ಯಂತ ತೆರೆಕಾಣಲಿದೆ.

ಕೊರೊನಾ ನಂತರ ಹಲವು ತಿಂಗಳ ಬಳಿಕ ಪ್ರೇಕ್ಷಕರ ಮುಂದೆ ದರ್ಶನ್ ತೆರೆ ಮೇಲೆ ಬರಲಿದ್ದು, ಶಿವರಾತ್ರಿ ಹಬ್ಬದ ದಿನದಂದು ಅಭಿಮಾನಿಗಳಿಗೆ ರಸದೌತಣ ನೀಡಲಿದ್ದಾರೆ. ನಾಳೆ ಬಿಡುಗಡೆಯಾಗುತ್ತಿರುವ ರಾಬರ್ಟ್ ಸಿನಿಮಾಕ್ಕೆ ನಿರ್ದೇಶಕ ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ದರ್ಶನ್‍ಗೆ ಜೋಡಿಯಾಗಿ ಆಶಾ ಭಟ್ ಅಭಿನಯಿಸಿದ್ದಾರೆ. ಚಿತ್ರಕ್ಕೆ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಬಂಡವಾಳ ಹೂಡಿದ್ದು, ಅರ್ಜುನ್ ಜನ್ಯ ಹಾಗೂ ವಿ ಹರಿಕೃಷ್ಣ ಸಂಗೀತಾ ಸಂಯೋಜಿಸಿದ್ದಾರೆ. ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಜಗಪತಿ ಬಾಬು, ರವಿ ಕೃಷ್ಣ, ದೇವರಾಜ್, ರವಿ ಶಂಕರ್, ವಿನೋದ್ ಪ್ರಭಾಕರ್ ಹಲವಾರು ಕಲಾವಿದರು ಅಭಿನಯಿಸಿದ್ದಾರೆ.

ಈಗಾಗಲೇ ರಾಬರ್ಟ್ ಸಿನಿಮಾದ ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ನಾಳೆ ಸಿನಿಮಾ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಕನ್ನಡದಲ್ಲಿ ಅಷ್ಟೇ ಅಲ್ಲದೆ ತೆಲುಗಿನಲ್ಲಿ ಕೂಡ ರಾಬರ್ಟ್ ಸಿನಿಮಾ ಬಿಡುಗಡೆಯಾಗುತ್ತಿದ್ದು, ಸಿನಿಮಾದ ಕಣ್ಣೆ ಅದರಿಂದಿ ಸಾಂಗ್ ಟಾಲಿವುಡ್‍ನಲ್ಲಿ ನ್ಯೂ ಟ್ರೆಂಡ್ ಸೃಷ್ಟಿಸಿದೆ.

ಇತ್ತೀಚೆಗಷ್ಟೇ ರಾಬರ್ಟ್ ಸಿನಿಮಾದ ನಿರ್ಮಾಪಕ ಉಮಾಪತಿಯವರು ಯಾರಾದರೂ ಪೈರಸಿ ಮಾಡಿ ಸಿಕ್ಕಿಹಾಕಿಕೊಂಡರೆ ಪರಿಣಾಮ ಘೋರವಾಗಿರುತ್ತದೆ. ದಯವಿಟ್ಟು ಪೈರಸಿ ಮಾಡಬೇಡಿ. ಸಿನಿಮಾವನ್ನು ಎಲ್ಲರೂ ಥಿಯೇಟರ್‍ಗೆ ಬಂದು ನೋಡಿ ಎಂದು ಮನವಿಮಾಡಿದರು.

ಒಟ್ಟಾರೆ ಕಳೆದ ವರ್ಷದಿಂದ ಬಿಡುಗಡೆಗೊಳಿಸಲು ಕಾಯುತ್ತಿದ್ದ ರಾಬರ್ಟ್ ಸಿನಿಮಾ ಭವಿಷ್ಯ ನಾಳೆ ನಿರ್ಧರವಾಗಲಿದೆ.

Comments

Leave a Reply

Your email address will not be published. Required fields are marked *