ನಾಲ್ಕು ಮದುವೆ, ಲವ್ ನೆಪದಲ್ಲಿ 20ಕ್ಕೂ ಹೆಚ್ಚು ಯುವತಿಯರಿಗೆ ವಂಚನೆ- ಹೆಣ್ಣು ಬಾಕನ ಬಂಧನ

ಬೆಂಗಳೂರು: ನಾಲ್ಕು ವಿವಾಹ ಹಾಗೂ ಪ್ರೀತಿ ಹೆಸರಲ್ಲಿ 20ಕ್ಕೂ ಹೆಚ್ಚು ಯುವತಿಯರಿಗೆ ವಂಚಿಸಿದ್ದ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ನಗರದ ಬ್ಯಾಡರಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಸುರೇಶ್ ಅಲಿಯಾಸ್ ಮೈಸೂರು ಸುರೇಶಾ ಬಂಧಿತ ಆರೋಪಿ. ಮ್ಯಾಟ್ರಿಮೋನಿಯಲ್ಲಿ ಯುವತಿಯರನ್ನು ಪರಿಚಯ ಮಾಡಿಕೊಂಡು ಮದುವೆ ಆಗುವುದಾಗಿ ನಂಬಿಸಿ ವಂಚಿಸುತ್ತಿದ್ದ. ವಿಧವೆ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಕೀಚಕ ಹಣ ಪಡೆದು ನಂತರ ವಂಚಿಸುತ್ತಿದ್ದ. ಈಗಾಗಲೇ ನಾಲ್ವರನ್ನು ಮದುವೆ ಆಗಿರುವ ಆರೋಪಿ ಸುರೇಶ್, 20ಕ್ಕೂ ಹೆಚ್ಚು ಯುವತಿಯೊಂದಿಗೆ ಪ್ರೀತಿಯಲ್ಲಿದ್ದ ಎಂಬ ಭಯಾನಕ ಸತ್ಯವನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ಮಹಿಳೆಯೊಬ್ಬರು ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದರು. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ನಂತರ ವಿಚಾರಣೆ ನಡೆಸಿದಾಗ ಸುರೇಶನ ಪ್ರಕರಣಗಳು ಬೆಳಕಿಗೆ ಬಂದಿವೆ. ಇದೀಗ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ.

ಆರೋಪಿ ಸುರೇಶ್ ಮೂಲತಃ ಮೈಸೂರಿನವನು, 2013ರಲ್ಲಿ ಶ್ವೇತಾ ಆಚಾರ್ಯ ಅವರ ಜೊತೆ ವಿವಾಹವಾಗಿ ವಿಚ್ಛೇದನ ಆಗಿದೆ. ಹೆಂಡತಿ ದೂರವಾದ ಮೇಲೆ ವಿಚ್ಛೇದನ ಪಡೆದ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಬಲೆಗೆ ಹಾಕಿಕೊಳ್ಳುತ್ತಿದ್ದ. ಹೀಗೆ ಮಾಡಿ ಐದಾರು ವರ್ಷಗಳಲ್ಲಿ ಬರೋಬ್ಬರಿ ನಾಲ್ವರನ್ನು ಮದುವೆ ಆಗಿದ್ದಾನೆ. ಅಷ್ಟೇ ಅಲ್ಲದೆ ಮತ್ತಷ್ಟು ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ.

ವಿಚ್ಛೇದಿತ ಹಣವಂತ ಮಹಿಳೆಯರು ಪರಿಚಯವಾಗುತ್ತಿದ್ದಂತೆ ನಿವೇಶನ ಖರೀದಿಸುವ ನೆಪದಲ್ಲಿ ಅವರಿಂದ ಹಣ ಪಡೆಯುತ್ತಿದ್ದ. ನಂತರ ಹಣ ವಾಪಸ್ ನೀಡದೆ ಪರಾರಿಯಾಗುತ್ತಿದ್ದ. ಇದೇ ರೀತಿ ಮ್ಯಾಟ್ರಿಮೋನಿಯಲ್ಲಿ ಹಲವು ವಿಚ್ಛೇಧಿತ ಮಹಿಳೆಯ ಪರಿಚಯ ಮಾಡಿಕೊಂಡಿದ್ದ. ಆರೋಪಿ ಮಾತಿಗೆ ಮರುಳಾಗಿ ಹಣ ನೀಡುತ್ತಿದ್ದ ಮಹಿಳೆಯರು, ಹಣ ಕಳೆದುಕೊಂಡು ಮೋಸ ಹೋಗುತ್ತಿದ್ದರು.

ಇದೇ ರೀತಿ ಆರೋಪಿ ಮಾತಿಗೆ ಮರುಳಾಗಿದ್ದ ಮಹಿಳೆ ಮಾಂಗಲ್ಯ ಸರ ಸೇರಿ 80 ಗ್ರಾಂ. ಒಡವೆ ಹಾಗೂ ಹಣ ಕೊಟ್ಟು ಮೊಸ ಹೋಗಿದ್ದಳು. ನಂತರ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ತನಿಖೆ ಪ್ರಾರಂಭಿಸಿದ ಪೊಲೀಸರು, ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ನಂತರ ವಿಚಾರಣೆ ನಡೆಸಿದ್ದು, ಈ ವೇಳೆ ಆರೋಪಿ ಬಣ್ಣ ಬಯಲಾಗಿದೆ. ಆರೋಪಿ ಮೈಸೂರು, ಬೆಂಗಳೂರು, ರಾಮನಗರ ಸೇರಿದಂತೆ ಹಲವಡೆಯ ಮಹಿಳೆಯರಿಗೆ ಮೋಸ ಮಾಡಿರುವುದು ತನಿಖೆ ವೇಳೆ ಬಹಿರಂಗವಾಗಿದೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ವಿಚಾರಣೆ ಮುಂದುವರೆಸಿದ್ದಾರೆ.

Comments

Leave a Reply

Your email address will not be published. Required fields are marked *