ನಾಯಿ ಬೆನ್ನತ್ತಿ ಬಂದು ವಾಟರ್ ಟ್ಯಾಂಕ್‍ಗೆ ಬಿತ್ತು ಚಿರತೆ

ಉಡುಪಿ: ಬೇಟೆ ಅರಸುತ್ತಾ ಬಂದ ಚಿರತೆಯೊಂದು ನೀರಿನ ಟ್ಯಾಂಕ್ ಒಳಗೆ ಬಿದ್ದ ಘಟನೆ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನಲ್ಲಿ ನಡೆದಿದೆ.

ಕುಂದಾಪುರದ ಕೊಡ್ಲಾಡಿಯಲ್ಲಿ ಘಟನೆ ನಡೆದಿದ್ದು, ಅರಣ್ಯಾಧಿಕಾರಿಗಳು ಮತ್ತು ಸಾರ್ವಜನಿಕರ ಕಾರ್ಯಾಚರಣೆ ಮೂಲಕ ಚಿರತೆ ರಕ್ಷಿಸಲಾಯ್ತು. ಚಂದ್ರ ಶೆಟ್ಟಿಯವರ ಮನೆಯ ಸಮೀಪದ ನೀರಿನ ಟ್ಯಾಂಕ್ ಗೆ ಚಿರತೆ ಬಿದ್ದು ಘರ್ಜನೆ ಮಾಡುತ್ತಿತ್ತು. ಶಬ್ದಕೇಳಿದ ಮನೆಯವರು ಇಣುಕಿ ನೋಡಿದಾಗ ಚಿರತೆ ಕಾಣಿಸಿದೆ.

ಆರಂಭದಲ್ಲಿ ಭಯಗೊಂಡ ಮನೆಯವರು ಕೂಡಲೇ ಸ್ಥಳೀಯರು ಮತ್ತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿ ಪ್ರಭಾಕರ್ ಅವರ ತಂಡ ಚಿರತೆಯನ್ನು ಮೇಲಕ್ಕೆತ್ತಿ, ಬೋನಿಗೆ ಹಾಕಿ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ. ಚಿರತೆಗೆ ಸುಮಾರು ಐದು ವರ್ಷವಾಗಿದೆ. ಹಸಿವಿನಿಂದ ನಾಯಿಯನ್ನು ಹುಡುಕುತ್ತಾ ಬಂದಿರಬಹುದು ಎಂದು ಅರಣ್ಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಅರಣ್ಯಾಧಿಕಾರಿ ಪ್ರಭಾಕರ್ ತಂಡದಲ್ಲಿ, ಶರತ್, ಶಿವಕುಮಾರ್, ಉದಯ್, ರಂಜಿತ್, ವಿಜಯ್ ಇದ್ದರು. ಸ್ಥಳೀಯ ಯುವಕರು ಬೋನ್ ಜೋಡಿಸಲು, ಬಲೆ ಹಿಡಿದು ಇಲಾಖೆಗೆ ಸಹಕರಿಸಿದರು.

Comments

Leave a Reply

Your email address will not be published. Required fields are marked *