ನಾನು ಎಷ್ಟೇ ಹೋರಾಡಿದರು ನಿನ್ನ ಉಳಿಸಿಕೊಳ್ಳಲು ಆಗ್ಲಿಲ್ಲ, ಮಿಸ್ ಯು ಅಮ್ಮ: ಪ್ರೇಮ್

ಬೆಂಗಳೂರು: ನಾನು ಎಷ್ಟೇ ಹೋರಾಟ ನಡೆಸಿದರು ನಿನ್ನನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ನಟ, ನಿರ್ದೇಶಕ ಜೋಗಿ ಪ್ರೇಮ್ ಅಮ್ಮನ ಬಗ್ಗೆ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದಾರೆ.

ಪ್ರೇಮ್ ಅವರ ತಾಯಿ ಭಾಗ್ಯಮ್ಮ ಕೆಲವು ತಿಂಗಳಿನಿಂದ ಲ್ಯುಕೇಮಿಯಾ ಕ್ಯಾನ್ಸರ್ ನಿಂದ (ರಕ್ತ ಕ್ಯಾನ್ಸರ್) ಬಳಲುತ್ತಿದ್ದರು. ಹೀಗಾಗಿ ಬೆಂಗಳೂರಿನ ಜಯನಗರದ ಶಾಂತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರೇಮ್ ಅವರ ತಾಯಿ ಶುಕ್ರವಾರ ರಾತ್ರಿ ಸುಮಾರು 9 ಗಂಟೆಗೆ ಕೊನೆಯುಸಿರೆಳೆದಿದ್ದರು.

ಈಗ ಅಮ್ಮನ್ನು ಕಳೆದುಕೊಂಡ ನೋವಿನಲ್ಲಿರುವ ಪ್ರೇಮ್ ಅವರು ತಮ್ಮ ತಾಯಿಯ ಬಗ್ಗೆ ಟ್ವೀಟ್ ಮಾಡಿದ್ದು, ನಾನು ಎಷ್ಟೇ ಹೋರಾಟ ಮಾಡಿದರೂ ಕೊನೆಗೂ ನಿನ್ನನ್ನು ಉಳಿಸಿಕೊಳ್ಳಲು ಆಗಲಿಲ್ಲ. ನಿನ್ನ ಋಣ ತೀರಿಸೋಕೆ ಮತ್ತೆ ನಿನ್ನ ಹೊಟ್ಟೆಯಲಿ ಹುಟ್ಟುವುದಕ್ಕೆ ನನಗೆ ಒಂದು ಅವಕಾಶ ಮಾಡಿಕೊಂಡು, ಯಾವತ್ತು ಕಾಯುತ್ತಿರುತ್ತೇನೆ. ಮಿಸ್ ಯು ಅಮ್ಮ ಎಂದು ಬರೆದುಕೊಂಡು ತಾಯಿ ಭಾಗ್ಯಮ್ಮ ಅವರ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

ಪ್ರೇಮ್ ಅವರು ಮಾತೃ ಹೃದಯಿಯಾಗಿದ್ದು, ಅವರ ತಾಯಿಯನ್ನು ಬಹಳ ಇಷ್ಟಪಡುತ್ತಿದ್ದರು. ಪ್ರೇಮ್ ಅವರು ಯಾವುದೇ ಸಿನಿಮಾ ಮಾಡಿದರು ಅದರಲ್ಲಿ ತಾಯಿಗೆ ಸಂಬಂಧಿಸಿದ ಒಂದು ಹಾಡು ಮತ್ತು ತಾಯಿ ಬಗ್ಗೆ ದೃಶ್ಯಗಳು ಇರುತ್ತಿತ್ತು. ಅವರ ಮೊದಲ ಸಿನಿಮಾ ಎಕ್ಸ್ ಕ್ಯೂಸ್‍ಮಿ ಯಿಂದ ಹಿಡಿದು ಇತ್ತೀಚೆಗೆ ಬಿಡುಗಡೆಯಾಗಿದ್ದ ಅವರು ನಿರ್ದೇಶನ ದಿ ವಿಲನ್ ಸಿನಿಮಾದವರೆಗೂ ಅವರ ಎಲ್ಲ ಸಿನಿಮಾದಲ್ಲಿ ತಾಯಿಯ ಬಗ್ಗೆ ವಿಶೇಷವಾದ ಪ್ರೀತಿಯನ್ನು ವ್ಯಕ್ತಪಡಿಸಿದ್ದರು.

ಅತ್ತೆ ಭಾಗ್ಯಮ್ಯ ಅವರ ನಿಧನದ ಸುದ್ದಿಯನ್ನು ರಕ್ಷಿತಾ ಪ್ರೇಮ್ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದರು. ಭಾಗ್ಯಮ್ಮ ಅವರಿಗೆ ಪ್ರೇಮ್ ಮತ್ತು ಅರುಣ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಭಾಗ್ಯಮ್ಮ ಅವರಿಗೆ ಕೊರೊನಾ ಪರೀಕ್ಷೆ ಮಾಡಿಸಿದ್ದು, ವರದಿ ನೆಗೆಟಿವ್ ಬಂದಿತ್ತು. ಮಂಡ್ಯದ ಬೆಸಗರಹಳ್ಳಿ ಫಾರ್ಮ್ ಹೌಸ್‍ನಲ್ಲಿ ಅಂತ್ಯಕ್ರಿಯೆ ನಡೆಯಿತು.

Comments

Leave a Reply

Your email address will not be published. Required fields are marked *