ನಾಗರಾಜನಿಂದ ಕಲ್ಸಂಕ ಜಂಕ್ಷನ್ ಬ್ಲಾಕ್- ರಸ್ತೆ ದಾಟಿಸಲು ಟ್ರಾಫಿಕ್ ಪೊಲೀಸರ ಸಹಕಾರ

ಉಡುಪಿ: ನಗರದ ಕಲ್ಸಂಕ ಜಂಕ್ಷನ್ ನಲ್ಲಿ ಇಂದು ಏಕಾಏಕಿ ಟ್ರಾಫಿಕ್ ಜಾಮ್ ಆಯ್ತು. ಜಂಕ್ಷನ್ ನಲ್ಲಿ ಮೂರು ಜನ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಇದ್ದರೂ ಜಾಮ್ ಕ್ಲಿಯರ್ ಮಾಡಲು ಸಾಧ್ಯವಾಗಿಲ್ಲ. ಯಾಕಂದರೆ ನಾಗರಾಜ ರೋಡ್ ಕ್ರಾಸಿಂಗ್ ಮಾಡುತ್ತಿದ್ದ.

ಉಡುಪಿಯ ಕಲ್ಸಂಕ ಜಂಕ್ಷನ್ ಗೆ ನಾಗರಹಾವು ಬಂದಿತ್ತು. ಅಂಬಾಗಿಲು ರಸ್ತೆ ಕಡೆಯಿಂದ ಕೃಷ್ಣಮಠದ ಪಾರ್ಕಿಂಗ್ ಏರಿಯಾಗೆ ಹೋಗುವ ಕಡೆ ನಾಗರಹಾವು ನಿಧಾನಕ್ಕೆ ಚಲಿಸುತ್ತಿತ್ತು. ಸಿಮೆಂಟ್ ರಸ್ತೆಯಾದ್ದರಿಂದ ವೇಗವಾಗಿ ರಸ್ತೆದಾಟಲು ನಾಗರಹಾವಿಗೆ ಸಾಧ್ಯವಾಗಿಲ್ಲ. ಹೀಗಾಗಿ ಸ್ಥಳೀಯರು, ವಾಹನ ಸವಾರರು, ಪೊಲೀಸರು ರಸ್ತೆದಾಟಲು ಅವಕಾಶ ಮಾಡಿಕೊಟ್ಟರು.

ಯಾವುದೇ ವಾಹನಗಳು ಅಡ್ಡ ಚಲಿಸದಂತೆ ನಾಗರಹಾವಿಗೆ ತಬ್ಬಿಬ್ಬಾಗದಂತೆ ನೋಡಿಕೊಂಡರು. ಕೆಲವು ಎಡಬಿಡಂಗಿ ದ್ವಿಚಕ್ರವಾಹನ ಸವಾರರು ಹಾವು ದಾಟುವ ಮೊದಲೇ ರಸ್ತೆದಾಟಲು ಪ್ರಯತ್ನಿಸಿದರೂ ಪೊಲೀಸರು ಅಡ್ಡಗಟ್ಟಿ ನಾಗರಹಾವನ್ನು ಸುರಕ್ಷಿತವಾಗಿ ರಸ್ತೆ ದಾಟಿಸಿದರು.

ನಾನು ಸಂಜೆ ಮನೆಗೆ ಹೋಗುತ್ತಿದ್ದ ವೇಳೆ ಕಲ್ಸಂಕ ಜಂಕ್ಷನ್ ಬಳಿ ವಿಪರೀತ ಟ್ರಾಫಿಕ್ ಜಾಮ್ ಇತ್ತು. ಟ್ರಾಫಿಕ್ ಪೊಲೀಸರು ಇದ್ದರೂ ಯಾವ ರಸ್ತೆಗಳನ್ನು ಕ್ಲಿಯರ್ ಮಾಡಿಕೊಡುತ್ತಿರಲಿಲ್ಲ. ಆಶ್ಚರ್ಯಗೊಂಡು ಮುಂದೆ ಬಂದು ನೋಡಿದಾಗ ನಾಗರಹಾವೊಂದು ರಸ್ತೆ ದಾಟುತ್ತಿತ್ತು. ಪೊಲೀಸರ ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಯಾವುದೇ ಗಡಿಬಿಡಿಯಿಲ್ಲದೆ ನಾಗರಹಾವು ರಸ್ತೆ ದಾಟಿತು ಎಂದು ಪ್ರತ್ಯಕ್ಷದರ್ಶಿ ಮಂಜುನಾಥ್ ಶೇಟ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.

Comments

Leave a Reply

Your email address will not be published. Required fields are marked *