ನಷ್ಟದಲ್ಲಿರುವ ʼಮಹಾರಾಜʼನನ್ನು ಖರೀದಿಸಲು ಮುಂದಾದ ಟಾಟಾ ಕಂಪನಿ

ನವದೆಹಲಿ: 90 ಸಾವಿರ ಕೋಟಿ ರೂ. ನಷ್ಟದ ಸುಳಿಯಲ್ಲಿ ಸಿಲುಕಿರುವ ʼಮಹಾರಾಜʼನನ್ನು ಖರೀದಿಸಲು ಟಾಟಾ ಕಂಪನಿ ಆಸಕ್ತಿ ತೋರಿಸಿದೆ.

ʼಮಹಾರಾಜ’ ಲಾಂಛನದಿಂದ ಗುರುತಿಸಿಕೊಂಡಿರುವ ಏರ್‌ ಇಂಡಿಯಾ ಕಂಪನಿಯನ್ನು ಮಾರಾಟ ಮಾಡುವ ಸಂಬಂಧ ಕೇಂದ್ರ ಸರ್ಕಾರ ಬಿಡ್ಡಿಂಗ್‌ ಆಹ್ವಾನಿಸಿದ್ದು ಇಂದು ಸಂಜೆ 5 ಗಂಟೆಗೆ ಅವಧಿ ಮುಕ್ತಾಯವಾಗಿದೆ.

ಈ ಬಿಡ್ಡಿಂಗ್‌ನಲ್ಲಿ ಟಾಟಾ ಕಂಪನಿ, ಏರ್‌ ಇಂಡಿಯಾ ನೌಕರರ ಒಕ್ಕೂಟ ಮತ್ತು ಅಮೆರಿಕದ ಇಂಟರ್ಅಪ್ಸ್ ಕಂಪನಿ ಖರೀದಿಸಲು ಆಸಕ್ತಿ ತೋರಿಸಿದೆ. ಕೇಂದ್ರ ಸರ್ಕಾರ ಜನವರಿ 5 ರಂದು ಬಿಡ್ಡಿಂಗ್‌ಗೆ ಅರ್ಹತೆ ಪಡೆದವರ ಹೆಸರನ್ನು ಪ್ರಕಟಿಸುವ ಸಾಧ್ಯತೆಯಿದೆ.

ಏರ್‌ ಇಂಡಿಯಾ ಮಾರಾಟ ಮಾಡುವ ಕೇಂದ್ರ ಸರ್ಕಾರದ ಮೊದಲ ಪ್ರಯತ್ನ ವಿಫಲವಾಗಿತ್ತು. 2018ರಲ್ಲಿ ಕೇಂದ್ರ ಸರ್ಕಾರ ಬಿಡ್‌ ಆಹ್ವಾನಿಸಿತ್ತು. ಆದರೆ ಯಾರೂ ಖರೀದಿಗೆ ಆಸಕ್ತಿ ತೋರಿಸಲಿಲ್ಲ. ಈ ಸಂದರ್ಭದಲ್ಲಿ ಶೇ.76 ರಷ್ಟು ಪಾಲು ಮಾರಾಟ ಮಾಡುವುದರ ಜೊತೆಗೆ ಸಾಲವನ್ನು ಪಾವತಿಸಬೇಕೆಂಬ ಷರತ್ತು ವಿಧಿಸಲಾಗಿತ್ತು.

ಈ ಬಾರಿ ಬಿಡ್‌ನಲ್ಲಿ ಶೇ.100 ರಷ್ಟು ಷೇರನ್ನು ಮಾರಾಟ ಮಾಡುವುದಾಗಿ ಕೇಂದ್ರ ಸರ್ಕಾರ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಕಂಪನಿಗಳು ಬಿಡ್‌ನಲ್ಲಿ ಭಾಗವಹಿಸಿ ಖರೀದಿಸಲು ಆಸಕ್ತಿ ತೋರಿಸಿವೆ.

ಮಾಧ್ಯಮಗಳಲ್ಲಿ ಪ್ರಕಟವಾದಂತೆ ಟಾಟಾ ಗ್ರೂಪ್, ಮಲೇಷ್ಯಾದ ಏರ್ ಏಷ್ಯಾ ಗ್ರೂಪ್‌ ಜೊತೆ ಸೇರಿ ಜಂಟಿಯಾಗಿ ಬಿಡ್‌ನಲ್ಲಿ ಭಾಗವಹಿಸಿದೆ ಎಂದು ವರದಿಯಾಗಿದೆ. ಸದ್ಯ ಏರ್‌ ಏಷ್ಯಾ ಇಂಡಿಯಾದಲ್ಲಿ ಟಾಟಾ ಗ್ರೂಪ್‌ ಶೇ.49ರಷ್ಟು ಪಾಲುದಾರಿಕೆ ಹೊಂದಿದೆ. 2020-21ರ ಅಂತ್ಯದ ವೇಳೆಗೆ ಏರ್‌ಏಷ್ಯಾ ಇಂಡಿಯಾದಲ್ಲಿನ ತನ್ನ ಪಾಲನ್ನು ನಿಧಾನವಾಗಿ ಶೇ.76 ಕ್ಕಿಂತ ಹೆಚ್ಚಿಸಲು ಟಾಟಾ ಸಂಸ್ಥೆ ಯೋಚಿಸುತ್ತಿರುವ ಹಿನ್ನೆಲೆಯಲ್ಲಿ ಏರ್‌ ಇಂಡಿಯಾ ಖರೀದಿಗೆ ಆಸಕ್ತಿ ತೋರಿಸಿದೆ ಎನ್ನಲಾಗುತ್ತಿದೆ.

ವಿಶೇಷ ಏನೆಂದರೆ 88 ವರ್ಷದ ಹಿಂದೆ ಟಾಟಾ ಕಂಪನಿಯೇ ಏರ್‌ ಇಂಡಿಯಾ ಕಂಪನಿಯನ್ನು ಆರಂಭಿಸಿತ್ತು. 1932ರಲ್ಲಿ ಟಾಟಾ ಏರ್‌ಲೈನ್ಸ್‌ ಹೆಸರಿನಲ್ಲಿ ಆರಂಭಗೊಂಡ ಕಂಪನಿ ಬಳಿಕ 1946ರಲ್ಲಿ ಏರ್‌ ಇಂಡಿಯಾ ಕಂಪನಿಯಾಗಿ ಬದಲಾಗಿತ್ತು.

Comments

Leave a Reply

Your email address will not be published. Required fields are marked *