ನವರಸ ನಾಯಕ ಜಗ್ಗೇಶ್ ಬರ್ತ್‍ಡೇಗೆ ಬಂತು ‘ತೋತಾಪುರಿ’  ಪೋಸ್ಟರ್

ನ್ನಡ ಚಿತ್ರರಂಗದ ನವರಸ ನಾಯಕ ಜಗ್ಗೇಶ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಹುಟ್ಟುಹಬ್ಬದ ಖುಷಿಯಲ್ಲಿರುವ ಜಗ್ಗೇಶ್ ಅವರಿಗೆ ತೋತಾಪುರಿ ಸಿನಿಮಾ ಟೀಂನಿಂದ ವಿಶೇಷ ಉಡುಗೊರೆಯೊಂದು ಸಿಕ್ಕಿದೆ.

ಜಗ್ಗೇಶ್ ಜನ್ಮದಿನದ ಪ್ರಯುಕ್ತ ತೋತಾಪುರಿ ಚಿತ್ರತಂಡ ಪೋಸ್ಟರ್ ರಿಲೀಸ್ ಮಾಡುವ ಮೂಲಕ, ಇಂದಿನಿಂದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದೆ. ವಿಭಿನ್ನ ಟೈಟಲ್ ಮೂಲಕ ಗಾಂಧಿನಗರದಲ್ಲಿ ನಿರೀಕ್ಷೆ ಹುಟ್ಟುಹಾಕಿರುವ ತೋತಾಪುರಿ ಸಿನಿಮಾದ ಶೂಟಿಂಗ್ ಇತ್ತೀಚೆಗಷ್ಟೇ ಕಂಪ್ಲೀಟ್ ಆಗಿದ್ದು, ಇದೀಗ ಜಗ್ಗೇಶ್ ಹುಟ್ಟುಹಬ್ಬಕ್ಕೆ ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ.

ಈ ಹಿಂದೆ ನೀರ್ ದೋಸ್ ಸಿನಿಮಾ ಮೂಲಕ ಪ್ರೇಕ್ಷಕರನ್ನು ಹೊಟ್ಟೆ ಉಣ್ಣಾಗುವಷ್ಟು ನಗಿಸಿದ್ದ ಜಗ್ಗೇಶ್ ಹಾಗೂ ನಿರ್ದೇಶಕ ವಿಜಯ್ ಪ್ರಸಾದ್ ಜೋಡಿ, ನಾಲ್ಕು ವರ್ಷಗಳ ಬಳಿಕ ತೋತಾಪುರಿ ಸಿನಿಮಾದ ಮೂಲಕ ಸಿನಿರಸಿಕರನ್ನು ಮತ್ತಷ್ಟು ರಂಜಿಸಲು ರೆಡಿಯಾಗಿದ್ದಾರೆ.

ಅಂದಹಾಗೆ ತೋತಾಪುರಿ ಸಿನಿಮಾವನ್ನು ಎರಡು ಭಾಗಗಳಾಗಿ ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಕೊರೋನಾ ಲಾಕ್‍ಡೌನ್‍ಗೂ ಮೊದಲೇ ಫಸ್ಟ್ ಶೆಡ್ಯುಲ್ಡ್ ಶೂಟಿಂಗ್ ಕಂಪ್ಲೀಟ್ ಮಾಡಿದ್ದ ಚಿತ್ರತಂಡ ಇತ್ತೀಚೆಗಷ್ಟೇ ಸೆಕೆಂಡ್ ಶೆಡ್ಯುಲ್ಡ್ ಶೂಟಿಂಗ್ ಕಂಪ್ಲಿಟ್ ಮಾಡುವ ಮೂಲಕ ಎರಡೂ ಸೀಕ್ವೆಲ್‍ಗಳ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಮೊದಲ ಸಿನಿಮಾ ಎಂಬ ದಾಖಲೆ ಬರೆದಿದೆ ತೋತಾಪುರಿ ಸಿನಿಮಾ.

ಜಗ್ಗೇಶ್ ರೈತನ ಪಾತ್ರದಲ್ಲಿ ಅಭಿನಯಿಸಿದ್ದು, ಹಿಂದೆಂದೂ ಕಾಣಿಸಿಕೊಳ್ಳದ ರೋಲ್‍ನಲ್ಲಿ ಪ್ರೇಕ್ಷಕರನ್ನು ನಕ್ಕು ನಲಿಸಲಿದ್ದಾರೆ. ಜಗ್ಗೇಶ್‍ಗೆ ಜೋಡಿಯಾಗಿ ಅದಿತಿ ಪ್ರಭುದೇವ ನಟಿಸಿದ್ದಾರೆ. ಉಳಿದಂತೆ ಡಾಲಿ ಧನಂಜಯ್, ಸುಮನ್ ರಂಗನಾಥ್, ವೀಣಾ ಸುಂದರ್, ದತ್ತಣ್ಣ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿ ಇರಲಿದೆ.

ಸುರೇಶ್  ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಶಿವಲಿಂಗ ಖ್ಯಾತಿಯ ನಿರ್ಮಾಪಕ ಸುರೇಶ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅನೂಪ್ ಸೀಳೀನ್ ಮ್ಯೂಸಿಕ್, ನಿರಂಜನ್ ಬಾಬು ಕ್ಯಾಮೆರಾ ವರ್ಕ್, ಸುರೇಶ್ ಅರಸ್ ಸಂಕಲನ ಸಿನಿಮಾಕ್ಕಿರಲಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿರುವ ತೋತಾಪುರಿ ಚಿತ್ರತಂಡ, ಏಪ್ರಿಲ್ ಅಥವಾ ಮೇ ವೇಳೆಗೆ ಸಿನಿಮಾ ರಿಲೀಸ್ ಮಾಡಲು ಪ್ಲಾನ್ ಹಾಕಿಕೊಂಡಿದೆ.

Comments

Leave a Reply

Your email address will not be published. Required fields are marked *