ನಮ್ಮ ಸಂಘಟನಾತ್ಮಕ ಕಾರ್ಯತಂತ್ರಗಳನ್ನೇ ಡಿಕೆಶಿ ಅನುಸರಿಸ್ತಿದ್ದಾರೆ: ಶೋಭಾ ಕರಂದ್ಲಾಜೆ

shobha karandlaje

ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಇದರಿಂದ ಮೇಲೆಳಲು ಬಿಜೆಪಿಯ ಸಂಘಟನಾತ್ಮಕ ಕಾರ್ಯತಂತ್ರಗಳನ್ನೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಫಾಲೋ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಸಂಸದೆ ಶೋಭಾ ಕರಂದ್ಲಾಜೆ ಗುಡುಗಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತಾನಾಡಿದ ಶೋಭಾ ಕರಂದ್ಲಾಜೆ, ಕಾಂಗ್ರೆಸ್‍ನ ಈಗಿನ ಪರಿಸ್ಥಿತಿ ಕಂಡು ಪಕ್ಷದ ಪ್ರಮುಖ ಮುಖಂಡರಾದ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಆತಂಕಗೊಂಡು ವಿಚಲಿತರಾಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಂದ ಕಾಂಗ್ರೆಸ್ ಕಂಗಾಲಾಗಿದೆ ಎಂದು ಕಿಡಿಕಾರಿದರು.

ಡಿ.ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಕಾಂಗ್ರೆಸ್ ಎಲ್ಲಾ ಚುನಾವಣೆಯಲ್ಲಿ ಸೋಲು ಕಂಡಿದೆ. ಇದರಿಂದ ವಿಚಲಿತರಾಗಿರುವ ಡಿ.ಕೆ.ಶಿವಕುಮಾರ್ ರಾಜ್ಯ ಸರ್ಕಾರದ ಮೇಲೆ ಇಲ್ಲ-ಸಲ್ಲದ ಆರೋಪ ಮಾಡುತ್ತಿದ್ದಾರೆ. ಡಿಕೆಶಿಗೆ ಜನ ಬೆಂಬಲವಿಲ್ಲ, ಕಾರ್ಯಕರ್ತರ ಬೆಂಬಲವೂ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಸಿದ್ದರಾಮಯ್ಯ ಅವರು ಡಿಕೆಶಿಯವರ ಕಾರ್ಯಶೈಲಿಯನ್ನು ಕಾರ್ಯಕರ್ತರು ಒಪ್ಪುತ್ತಿಲ್ಲ. ಹಾಗಾಗಿ ಪ್ರತಿಸಾರಿ ಬಿಜೆಪಿ ಸರ್ಕಾರ, ರಾಜ್ಯದ ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಗಳ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಆದರೆ ರಾಜ್ಯದ ಜನ ಜಾಗೃತರಾಗಿದ್ದಾರೆ, ಅವರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ ಎಂದರು.

ಸಿದ್ದರಾಮಯ್ಯ ವಿಚಾರವಾದಿ ನಾಯಕ ಇರಬಹುದು. ಆದರೆ ಅವರು ಕೊಡವರ ಮತ್ತು ಹಿಂದೂಗಳ ಭಾವನೆಗೆ ಧಕ್ಕೆ ಮಾಡುತ್ತಿದ್ದಾರೆ. ಕೊಡವರು ಗೋಮಾಂಸ ತಿನ್ನುತ್ತಾರೆ. ಎಂದು ಅವರು ಹೇಳಿದ್ದರು. ಇದರಿಂದ ಒಂದು ಜನಾಂಗದ ಓಲೈಕೆಗಾಗಿ ಸಿದ್ದರಾಮಯ್ಯ ಇನ್ನೂಂದು ಜನಾಂಗದ ಭಾವನೆಗೆ ಧಕ್ಕೆ ತರುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಸಿದ್ದರಾಮಯ್ಯ ವಿರುದ್ಧ ಮಾತಿನ ಚಾಟಿ ಬೀಸಿದರು.

Comments

Leave a Reply

Your email address will not be published. Required fields are marked *