ನಮ್ಮ ವಿದ್ಯಾರ್ಥಿಗಳನ್ನು ತುರ್ತಾಗಿ ವಾಪಸ್ ಕಳಿಸಿ- ಮೈಸೂರು ವಿವಿಗೆ ಚೀನಾ ಮನವಿ

ಮೈಸೂರು: ನಮ್ಮ ವಿದ್ಯಾರ್ಥಿಗಳನ್ನು ತುರ್ತಾಗಿ ಸ್ವದೇಶಕ್ಕೆ ವಾಪಸ್ ಕಳಿಸಿ ಎಂದು ಮೈಸೂರು ವಿಶ್ವವಿದ್ಯಾಲಯಕ್ಕೆ ಚೀನಾ ಮನವಿ ಮಾಡಿಕೊಂಡಿದೆ.

ಚೀನಾದಿಂದ ಉನ್ನತ ಶಿಕ್ಷಣಕ್ಕಾಗಿ ಮೈಸೂರಿಗೆ ಬಂದಿರುವ ವಿದ್ಯಾರ್ಥಿಗಳನ್ನು ನಮ್ಮ ದೇಶಕ್ಕೆ ವಾಪಸ್ ಕಳುಹಿಸಿ ಎಂದು ಚೀನಾ ಸರ್ಕಾರ ಮೈಸೂರು ವಿವಿಗೆ ಮನವಿ ಮಾಡಿದೆ. ಭಾರತ ಮತ್ತು ಚೀನಾ ಗಡಿಭಾಗದಲ್ಲಿ ಯುದ್ಧದ ವಾತಾವರಣ ಸೃಷ್ಟಿಯಾಗಿರುವುದು ಮತ್ತು ಕೊರೊನಾ ವೈರಸ್ ಪರಿಣಾಮದಿಂದ ಚೀನಾ ಈ ರೀತಿ ಮನವಿ ಮಾಡಿದೆ ಎನ್ನಲಾಗಿದೆ.

ಚೀನಾ ಸರ್ಕಾರದ ತುರ್ತು ಮನವಿಗೆ ಸ್ಪಂದಿಸಿರುವ ಮೈಸೂರು ವಿವಿ, 10 ದಿನಗಳ ಮುಂಚಿತವಾಗಿಯೇ ಚೀನಾ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಮುಂದಾಗಿದೆ. ಮೈಸೂರು ವಿವಿಯಲ್ಲಿ ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ 80ಕ್ಕೂ ಹೆಚ್ಚು ಚೀನಾ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಹೀಗಾಗಿ ಚೀನಾದ ಸ್ನಾತಕೋತ್ತರ ವಿದ್ಯಾರ್ಥಿಗಳ ಪರೀಕ್ಷೆಯನ್ನು 10 ದಿನಗಳ ಕಾಲ ಮುಂಚಿತವಾಗಿ ನಡೆಸಲು ವಿವಿ ನಿರ್ಧಾರ ಮಾಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್ ಕುಮಾರ್, ಚೀನಾದ ರಾಯಭಾರಿ ಕಚೇರಿ ಸೂಚನೆ ಮೇರೆಗೆ ಪರೀಕ್ಷೆಗಳನ್ನು 10 ದಿನಗಳ ಮೊದಲೇ ನಡೆಸಲು ತೀರ್ಮಾನ ಮಾಡಿದ್ದೇವೆ. ಜೂನ್ 15ರಂದು ನಿಗಧಿಯಾಗಿದ್ದ ಪರೀಕ್ಷೆಯನ್ನು, ಜೂನ್ 1ಕ್ಕೆ ಆರಂಭ ಮಾಡಿ ಜೂ. 6ಕ್ಕೆ ಮುಕ್ತಾಯಗೊಳಿಸುತ್ತೇವೆ. ಪರೀಕ್ಷೆ ನಂತರ ವಿಶೇಷ ವಿಮಾನದಲ್ಲಿ ವಿದ್ಯಾರ್ಥಿಗಳು ಸ್ವದೇಶಕ್ಕೆ ತೆರಳಲಿದ್ದಾರೆ. ಚೀನಾ ಸರ್ಕಾರವೇ ವಿಮಾನ ವ್ಯವ್ಯಸ್ಥೆ ಮಾಡಲಿದೆ ಎಂದರು.

Comments

Leave a Reply

Your email address will not be published. Required fields are marked *