ನಮ್ಮ ನೆಲದಲ್ಲಿ ರಾಯಣ್ಣನ ಪ್ರತಿಮೆ ಸ್ಥಾಪನೆಗೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ: ಎಚ್‍ಡಿಕೆ

ಬೆಂಗಳೂರು: ಬೆಳಗಾವಿ ಪೀರನವಾಡಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ, ವೀರ ಕನ್ನಡಿಗ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಗೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ ಎಂದು ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಬೆಳಗಾವಿ ರಾಯಣ್ಣ ಪ್ರತಿಮೆ ಸ್ಥಾಪನೆಗೆ ಮರಾಠಿ ಭಾಷಿಕರು ವಿರೋಧ ವ್ಯಕ್ತಪಡಿಸಿದ ಕುರಿತು ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿರುವ ಎಚ್‍ಡಿಕೆ, ಬೆಳಗಾವಿ ಜಿಲ್ಲೆಯ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆಗೆ ವಿರೋಧಿಸಿ ಮರಾಠಿ ಭಾಷಿಗರು ದಾಂಧಲೆ ನಡೆಸಿದ್ದು ಅಕ್ಷಮ್ಯ. ನಮ್ಮ ನೆಲದಲ್ಲಿ ಅಪ್ರತಿಮ ಹೋರಾಟಗಾರ ರಾಯಣ್ಣನ ಪ್ರತಿಮೆ ಸ್ಥಾಪನೆಗೆ ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ ಎಂದಿದ್ದಾರೆ.

ಎಂಇಎಸ್, ಶಿವಸೇನೆ ಅಥವಾ ಮತ್ಯಾರೇ ಆಗಲಿ ನಮ್ಮ ನಾಡಿನ ಹೆಮ್ಮೆಯ ವೀರಪುತ್ರ ಸಂಗೊಳ್ಳಿ ರಾಯಣ್ಣನಿಗೆ ಅಪಮಾನ ಮಾಡಿದರೆ ಕನ್ನಡಿಗರ ಸಹನೆ ಪರೀಕ್ಷಿಸಿದಂತೆ. ಇಂತಹ ಉದ್ಧಟತನಗಳನ್ನು ಕನ್ನಡಿಗರು ಸಹಿಸುವುದಿಲ್ಲ ಎಂದು ಎಚ್ಚರಿಸುವೆ. ಸಂಗೊಳ್ಳಿ ರಾಯಣ್ಣ ನಮ್ಮ ನಾಡಿನ ಹೆಮ್ಮೆ. ಅವರ ಪ್ರತಿಮೆ ಸ್ಥಾಪನೆಗೆ ವಿರೋಧಿಸುವುದು ಕನ್ನಡಿಗರ ಕೆಚ್ಚೆದೆಯ ಸ್ವಾಭಿಮಾನ ಕೆಣಕಿದಂತೆ. ನಾಡಿನ ವೀರಪುತ್ರ ಮತ್ತು ವನಿತೆಯರ ವಿರುದ್ಧ ನಮ್ಮ ನೆಲದಲ್ಲಿ ತಗಾದೆ ತೆಗೆದರೆ ತಕ್ಕಪಾಠ ಕಲಿಸಬೇಕಾಗುತ್ತದೆ. ನಮ್ಮ ನಾಡಿನ ನೆಲ-ಜಲ, ಭಾಷೆ ಮತ್ತು ಗಡಿ ವಿಷಯದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ. ಈ ನೆಲದ ಅಸ್ಮಿತೆಗೆ ಭಂಗ ತರುವವರನ್ನು ಹೆಡೆಮುರಿ ಕಟ್ಟುವುದು ಸ್ವಾಭಿಮಾನಿ ಕನ್ನಡಿಗರ ರಕ್ತದಲ್ಲೇ ಇದೆ. ಕನ್ನಡಿಗರೆಂದರೆ – ಸಾಧುಂಗೆ ಸಾಧು, ಮಾಧುರ್ಯಂಗೆ ಮಾಧುರ್ಯನ್, ಬಾದಿಪ್ಪ ಕಲಿಗೆ ಕಲಿಯುಗ ವಿಪರೀತನ್ ಎಂದು ಎಚ್‍ಡಿಕೆ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *