ನಮ್ಮ ಊರಿನಲ್ಲಿ ಕ್ವಾರಂಟೈನ್ ಬೇಡ- ಗ್ರಾಮಸ್ಥರಿಂದ ಪ್ರತಿಭಟನೆ

ಕೊಪ್ಪಳ: ನಮ್ಮ ಊರಿನಲ್ಲಿ ಕ್ವಾರಂಟೈನ್ ಮಾಡೋದು ಬೇಡ ಎಂದು ಗ್ರಾಮಸ್ಥರು ಮಧ್ಯರಾತ್ರಿ ಧರಣಿ ಕುಳಿತ ಘಟನೆಯೊಂದು ಕೊಪ್ಪಳದ ಕಾರಟಗಿ ತಾಲೂಕಿನ ನಾಗನಕಲ್ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಪಾಲಿಟೆಕ್ನಿಕ್ ಕಾಲೇಜ್ ನಲ್ಲಿ ಕ್ವಾರೆಟೆಂನ್‍ಗೆ ಜಿಲ್ಲಾಡಳಿತ ಸಿದ್ಧತೆ ಮಾಡುತ್ತಿತ್ತು. ಈ ವಿಚಾರ ಅರಿತ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಶಂಕಿತರನ್ನು ಕಾಲೇಜಿನಲ್ಲಿ ಕ್ವಾರಂಟೈನ್ ಮಾಡುವುದು ಬೇಡ ಎಂದು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ತಹಶೀಲ್ದಾರ್ ಮಧ್ಯಸ್ಥಿಕೆ ವಹಿಸಲು ಮುಂದಾದರೂ ಗ್ರಾಮಸ್ಥರು ಮಾತ್ರ ತಮ್ಮ ಹಠ ಬಿಡಲಿಲ್ಲ.

ಜಿಲ್ಲಾಧಿಕಾರಿಗಳೇ ಸ್ಥಳಕ್ಕೆ ಬರಬೇಕು ಎಂದು ಪಟ್ಟುಹಿಡಿದ ಗ್ರಾಮಸ್ಥರು, ನಮ್ಮ ಊರಿಗೆ ಯಾವುದೇ ಕ್ವಾರೆಂಟನ್ ಸಿದ್ಧತೆ ಬೇಡ. ಕ್ವಾರೆಂಟೈನ್ ನಿಂದ ಕೊರೊನಾ ಸೋಂಕು ನಮ್ಮ ಊರಿಗೆ ಬರಬಹುದು ಎಂಬ ಆತಂಕ ಹೊರಹಾಕಿದ್ದಾರೆ. ಗ್ರಾಮಸ್ಥರ ಈ ಆತಂಕ ಜಿಲ್ಲಾಡಳಿತಕ್ಕೆ ತೆಲೆನೋವಾಗಿದ್ದು, ಸ್ಥಳಕ್ಕೆ ಕನಕಗಿರಿ ಶಾಸಕ ಬಸವರಾಜ ದಢೇಸೂಗೂರ ಭೇಟಿ ನೀಡಿ ಈ ಗ್ರಾಮದಲ್ಲಿ ಕ್ವಾರಂಟೈನ್ ಮಾಡಿಸದಂತೆ ಭರವಸೆ ನೀಡಿದರು. ಶಾಸಕರ ಭರವಸೆಯ ನಂತರ ಜನ ತಮ್ಮ ತಮ್ಮ ಮನೆಗೆ ತೆರಳಿದರು.

Comments

Leave a Reply

Your email address will not be published. Required fields are marked *