ನಮ್ಮೂರಿಗೂ ‘ಎಣ್ಣೆ’ ಅಂಗಡಿ ಮಂಜೂರಿ ಮಾಡಿಕೊಡಿ- ಸಚಿವ ಶೆಟ್ಟರ್‌ಗೆ ವ್ಯಕ್ತಿಯ ಮನವಿ

ಧಾರವಾಡ: ಲಾಕ್‍ಡೌನ್ ನಡುವೆಯೂ ಮದ್ಯದ ಮಾರಾಟ ಭರ್ಜರಿಯಾಗಿ ನಡೆಯುತ್ತಿರುವಾಗಲೇ ನಮ್ಮೂರಿಗೂ ಎಣ್ಣೆ ಅಂಗಡಿ ಮಂಜೂರಿ ಮಾಡಿಕೊಡಿ ಎಂದು ವ್ಯಕ್ತಿಯೊಬ್ಬ ಸಚಿವರಿಗೆ ಮನವಿ ಮಾಡಿಕೊಂಡಿರುವ ವಿಚಿತ್ರ ಪ್ರಸಂಗ ಧಾರವಾಡದಲ್ಲಿ ನಡೆದಿದೆ.

ಹೌದು ತಮಗೆ ಇಂತಹದೊಂದು ಮನವಿ ಬಂದಿತ್ತು ಎಂಬುದನ್ನು ಸ್ವಂತ ಸಚಿವ ಜಗದೀಶ ಶೆಟ್ಟರ್ ಅವರೇ ಹೇಳಿಕೊಂಡಿದ್ದಾರೆ. ಧಾರವಾಡದಲ್ಲಿ ಅಧಿಕಾರಿಗಳ ಸಭೆಯ ಬಳಿಕ ಮಾತನಾಡಿದ ಅವರು, ನಮ್ಮೂರಿಗೆ ಎಂಎಸ್‍ಐಎಲ್ ಮಳಿಗೆ ಕೊಡಿ ಎಂದು ವ್ಯಕ್ತಿಯೊಬ್ಬ ಇವತ್ತು ಬೆಳಗ್ಗೆ ನನ್ನ ಬಳಿ ಮನವಿ ಹಿಡಿದುಕೊಂಡು ಬಂದಿದ್ದ. ಏನ್ ಮಾಡೋದು ಇಂತವರು ನಮ್ಮಲ್ಲಿ ಇದಾರೆ. ನಾನು ಅವನಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮತ್ತು ಊರ ಹಿರಿಯರ ಒಪ್ಪಿಗೆ ತೆಗೆದುಕೊಂಡು ಬಾ ಎಂದು ಹೇಳಿ ಸಾಗ ಹಾಕಿದ್ದೇನೆ ಎಂದು ಹೇಳಿದ ಶೆಟ್ಟರ್ ತಿಳಿಸಿದರು.

ಜನರ ವಿರೋಧ ಬಂದ ಕಡೆಯ ಮದ್ಯದ ಮಳಿಗೆಗಳನ್ನು ನಾವು ಬಂದ್ ಮಾಡಿಸುತ್ತಿದ್ದೇವೆ. ಇಂತಹ ಸಮಯದಲ್ಲಿ ಹೊಸ ವೈನ್ ಶಾಪ್‍ಗಳಿಗೆ ಅನುಮತಿ ಕೊಡುವುದಿಲ್ಲ ಎಂದರು.

ಇದೇ ವೇಳೆ ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕುರಿತಂತೆ ಮಾತನಾಡಿದ ಅವರು, ರೈತರು ಮೆಕ್ಕೆಜೋಳ ಖರೀದಿ ಕೇಂದ್ರದ ಆಸೆ ಕೈ ಬಿಡುವಂತೆ ಹೇಳಿದ್ದಾರೆ. ಕೆಎಂಎಫ್ ಮೂಲಕ ದೊಡ್ಡ ಪ್ರಮಾಣದಲ್ಲಿ ಮೆಕ್ಕೆಜೋಳ ಖರೀದಿ ಆರಂಭಿಸಲಾಗಿತ್ತು. ಆದರೆ ಅದು ಯಶಸ್ಸು ಆಗಲಿಲ್ಲ. ಹೀಗಾಗಿ ಖರೀದಿ ಕೇಂದ್ರದ ಮೂಲಕ ಪಡೆಯಲು ಆಗುವುದಿಲ್ಲ ಎಂದು ಸರ್ಕಾರ ಐದು ಸಾವಿರ ರೂಪಾಯಿ ಸಬ್ಸಿಡಿ ಘೋಷಿಸಿದೆ. ಇನ್ನು ಮುಂದೆ ರೈತರು ಖರೀದಿ ಕೇಂದ್ರದ ವಿಚಾರ ಬಿಟ್ಟು ಮಾರ್ಕೆಟ್‍ನಲ್ಲಿ ತಮಗೆ ಯಾರಿಗೆ ಬೇಕೋ ಅವರಿಗೆ ಕೊಡಬಹುದು ಎಂದು ಶೆಟ್ಟರ್ ಹೇಳಿದರು.

Comments

Leave a Reply

Your email address will not be published. Required fields are marked *