ನನ್ನ ಗೆಲುವಿಗೆ ಸಹಾಯ ಮಾಡಿ- ನಂದಿಗ್ರಾಮದ ಬಿಜೆಪಿ ನಾಯಕನಿಗೆ ಮಮತಾ ಬ್ಯಾನರ್ಜಿ ಮನವಿ

– ಸಾಮಾಜಿಕ ಜಾಲತಾಣಗಳಲ್ಲಿ ಆಡಿಯೋ ವೈರಲ್

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಕಾವು ಹೆಚ್ಚಾಗಿದ್ದು, ಇದೇ ವೇಳೆ ಬಿಜೆಪಿ ನಾಯಕ ಪ್ರಳಯ್ ಪಾಲ್ ಹಾಗೂ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿಯವರ ಸ್ಫೋಟಕ ಆಡಿಯೋ ವೈರಲ್ ಆಗಿದೆ. ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ವಿರುದ್ಧ ಗೆಲುವು ಸಾಧಿಸಲು ಸಹಾಯ ಮಾಡುವಂತೆ ಮಮತಾ ಬ್ಯಾನರ್ಜಿ ಬಿಜೆಪಿ ನಾಯಕನ ಬಳಿ ಮನವಿ ಮಾಡಿದ್ದಾರೆ. ಈ ಕುರಿತು ಸ್ವತಃ ಪ್ರಳಯ್ ಪಾಲ್ ಹೇಳಿಕೆಯನ್ನೂ ನೀಡಿದ್ದಾರೆ.

ಬಿಜೆಪಿ ವೀಡಿಯೋ ಬಿಡುಗಡೆ ಮಾಡಿದ್ದು, ನಂದಿಗ್ರಾಮದಲ್ಲಿ ತಮ್ಮ ಹಾಗೂ ಟಿಎಂಸಿ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವಂತೆ ಮಮತಾ ಬ್ಯಾನರ್ಜಿ ನನಗೆ ಕರೆ ಮಾಡಿ ಮನವಿ ಮಾಡಿದರು ಎಂದು ಪ್ರಳಯ್ ಪಾಲ್ ತಿಳಿಸಿದ್ದಾರೆ. ಮತ್ತೊಂದೆಡೆ ಮಮತಾ ಬ್ಯಾನರ್ಜಿ ಬಿಜೆಪಿ ನಾಯಕ ಪಾಲ್ ಅವರಿಗೆ ಕರೆ ಮಾಡಿ ಮಾತನಾಡಿದ ಫೋನ್ ಸಂಭಾಷಣೆ ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ನನಗಾಗಿ ಕೆಲಸ ಮಾಡಿ, ಟಿಎಂಸಿಗೆ ಮರಳಿ ಬನ್ನಿ ಎಂದು ಮಮತಾ ಬ್ಯಾನರ್ಜಿ ಮನವಿ ಮಾಡಿದರು. ಆದರೆ ನಾನು ಬಹಳ ಹಿಂದೆಯೇ ಸುವೇಂದು ಅಧಿಕಾರಿ ಹಾಗೂ ಅಧಿಕಾರಿ ಕುಟುಂಬದೊಂದಿಗೆ ನಂಟು ಹೊಂದಿದ್ದೇನೆ. ಅಲ್ಲದೆ ಈಗ ಬಿಜೆಪಿಗಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದೆ ಎಂದು ಪ್ರಳಯ್ ಪಾಲ್ ತಿಳಿಸಿದ್ದಾರೆ.

ಎಡಪಂಥೀಯ ಸಿಪಿಐ(ಎಂ) ಪಕ್ಷದ ಆಡಳಿತವಿದ್ದಾಗ ನಂದಿಗ್ರಾಮದ ಜನರಿಗೆ ಚಿತ್ರಹಿಂಸೆ ನೀಡಲಾಗಿತ್ತು. ಈ ವೇಳೆ ಅಧಿಕಾರಿ ಕುಟುಂಬ ನಮ್ಮ ಪರವಾಗಿ ನಿಂತಿತು. ಹೀಗಾಗಿ ನಾನು ಅವರ ವಿರುದ್ಧ ಎಂದೂ ಹೋಗುವುದಿಲ್ಲ. ಆ ಧೈರ್ಯ ಸಹ ನನಗಿಲ್ಲ ಎಂದು ಪಾಲ್ ಅವರು ಆಡಿಯೋದಲ್ಲಿ ಹೇಳಿದ್ದಾರೆ.

ನಂದಿಗ್ರಾಮದ ಸ್ಥಳೀಯರಿಗೆ ಟಿಎಂಸಿ ಎಂದಿಗೂ ಹಕ್ಕು ನೀಡಿಲ್ಲ. ಹೀಗಾಗಿ ಬಿಜೆಪಿ ಜೊತೆ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತೇನೆ ಎಂದು ಮಮತಾ ಬ್ಯಾನರ್ಜಿ ಅವರಿಗೆ ತಿಳಿಸಿದ್ದೇನೆ. ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಸುವೇಂದು ಅಧಿಕಾರಿ ಗೆಲುವು ಸಾಧಿಸುವುದು ಖಚಿತ ಎಂದು ಬಿಜೆಪಿ ನಾಯಕ ಹೇಳಿದ್ದಾರೆ.

ಈ ಸಂಭಾಷಣೆಯ ಆಡಿಯೋ ಕ್ಲಿಪ್‍ನ್ನು ಬಿಜೆಪಿ ಮುಖಂಡ ಅಮಿತ್ ಮಾಳ್ವಿಯಾ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಳಯ್ ಪಾಲ್ ಅವರಿಗೆ ಕರೆ ಮಾಡಿ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. ಈ ವೇಳೆ ಟಿಎಂಸಿಯಲ್ಲಿ ಅವಮಾನಕ್ಕೊಳಗಾಗಿದ್ದೇನೆಂದು, ಈ ಕುಟುಂಬವನ್ನು ಬಿಡಲು ಆಗುವುದಿಲ್ಲ. ಅಲ್ಲದೆ ಬಿಜೆಪಿಗೆ ದ್ರೋಹ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎಂದು ಟ್ವೀಟ್‍ನಲ್ಲಿ ಅಮಿತ್ ಮಾಳ್ವಿಯಾ ಬರೆದಿದ್ದಾರೆ.

ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಪ್ರತಿಷ್ಠಿತ ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಇವರ ವಿರುದ್ಧ ಬಿಜೆಪಿಯಿಂದ ಸುವೇಂದು ಅಧಿಕಾರಿ ಸ್ಪರ್ಧಿಸುತ್ತಿದ್ದಾರೆ. ಇವರು ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದಾರೆ.

Comments

Leave a Reply

Your email address will not be published. Required fields are marked *