ನನ್ನ ಕೊರೊನಾ ವರದಿ ನೆಗೆಟಿವ್ ಬಂದಿದೆ: ಹೆಚ್‍ಡಿ.ರೇವಣ್ಣ

– ನಮ್ಮ ಮನೆಯವರು ಯಾರೂ ಕ್ವಾರಂಟೈನ್ ಅಗಿಲ್ಲ

ಹಾಸನ: ನನ್ನ ಕೊರೊನಾ ಪರೀಕ್ಷೆ ವರದಿ ನೆಗೆಟಿವ್ ಬಂದಿದೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿರುವ ಅವರು, ನಾನು ಕೊರೊನಾ ಟೆಸ್ಟ್ ಮಾಡಿಸಿದ್ದೇನೆ. ನನ್ನ ವರದಿ ನೆಗಟಿವ್ ಬಂದಿದೆ. ನಾನು ಕೊರೊನಾ ಟೆಸ್ಟ್ ಮಾಡಿಸಿ ರಿಸಲ್ಟ್ ಬರುವವರೆಗೂ ಯಾರನ್ನು ಭೇಟಿ ಮಾಡಬಾರದು ಎಂದು ಸುಮ್ಮನಿದ್ದೆ ಎಂದು ಹೇಳುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ನನ್ನ ಬೆಂಗಾವಲು ಪಡೆಯ ಸಿಬ್ಬಂದಿ ನನ್ನ ಜೊತೆ ಸಂಪರ್ಕದಲ್ಲಿ ಇಲ್ಲ. ನಮ್ಮ ಮನೆಯಲ್ಲಿ ಯಾರೂ ಹೋಂ ಕ್ವಾರಂಟೈನ್ ಆಗಿಲ್ಲ. ನನ್ನ ಪಿಎಗಳಿಗೂ ರಜೆ ನೀಡಿ ಕಳುಹಿಸಿದ್ದೇನೆ. ಬೆಂಗಾವಲು ಪಡೆಯ ನಾಲ್ವರಿಗೆ ಕೊರೊನಾ ಪಾಸಿಟಿವ್ ಬಂದ ತಕ್ಷಣ ನಾನು ಕೊರೊನಾ ಪರೀಕ್ಷೆ ಮಾಡಿಸಿದ್ದೇನೆ. ಇದಕ್ಕಾಗಿಯೇ ನಿನ್ನೆ ಮಾಡಬೇಕಿದ್ದ ತಾಲೂಕು ಪಂಚಾಯ್ತಿ ಸಭೆಯನ್ನು ಕೂಡ ಕ್ಯಾನ್ಸಲ್ ಮಾಡಿಸಿದ್ದೆ ಎಂದು ಹೇಳಿದ್ದಾರೆ.

ಕಳೆದ ಸೋಮವಾರ ರೇವಣ್ಣ ಅವರು ಗನ್‍ಮ್ಯಾನ್‍ಗಳು ಸೇರಿದಂತೆ ಅವರ 9 ಜನ ಸಿಬ್ಬಂದಿಗೆ ಕೊರೊನಾ ತಪಾಸಣೆ ಮಾಡಲಾಗಿತ್ತು. ಮಂಗಳವಾರ ಬಂದ ವರದಿಯಲ್ಲಿ ರೇವಣ್ಣ ಅವರ ನಾಲ್ವರು ಗನ್‍ಮ್ಯಾನ್‍ಗಳಿಗೂ ಕೊರೊನಾ ಪಾಸಿಟಿವ್ ಬಂದಿತ್ತು. ಹೀಗಾಗಿ ರೇವಣ್ಣ ಅವರಿಗೂ ಸೋಂಕು ಹರಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ ಅವರ ವರದಿ ನೆಗೆಟಿವ್ ಬಂದಿದೆ.

Comments

Leave a Reply

Your email address will not be published. Required fields are marked *