ನನ್ನ ಕಿಡ್ನಿ ಮಾರಾಟಕ್ಕಿದೆ ಎಂದು ಪತ್ರಿಕೆಯಲ್ಲಿ ಜಾಹೀರಾತು ನೀಡಿದ ವ್ಯಕ್ತಿ

– 91 ಲಕ್ಷ ಸಾಲ ತೀರಿಸಲು ಈ ನಿರ್ಧಾರ

ಶ್ರೀನಗರ: ತಾನು ಮಾಡಿದ 91 ಲಕ್ಷ ರೂ. ಸಾಲವನ್ನು ತೀರಿಸಲಾಗದೆ ವ್ಯಕ್ತಿ ತನ್ನ ಕಿಡ್ನಿ ಮಾರುವ ಕುರಿತು ನಿರ್ಧಾರ ಕೈಗೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ವ್ಯಕ್ತಿಯನ್ನು ಜಮ್ಮು ಕಾಶ್ಮೀರದ ಕುಲ್ಗಮ್ ಜಿಲ್ಲೆಯ ಖಾಜಿಗುಂಡ್‍ನ ನುಸ್ಸು ಪ್ರದೇಶದ ಸಬ್ಝರ್ ಅಹ್ಮದ್ ಖಾನ್(28) ಎಂದು ಗುರುತಿಸಲಾಗಿದೆ. ವ್ಯಕ್ತಿ ತನ್ನ ಕಿಡ್ನಿ ಮಾರುವುದಾಗಿ ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದಾರೆ. ಖಾನ್ ಕಾರ್ ಡೀಲರ್ ಆಗಿ ಕೆಲಸ ಮಾಡುತ್ತಿದ್ದು, ಬ್ಯುಸಿನೆಸ್‍ನಲ್ಲಿ ನಷ್ಟವಾಗಿದ್ದಕ್ಕೆ ಕಿಡ್ನಿ ಮಾರಲು ಮುಂದಾಗಿದ್ದಾರೆ.

ನನ್ನ ಕಿಡ್ನಿಯನ್ನು ಮಾರಾಟ ಮಾಡಬೇಕೆಂದಿದ್ದೇನೆ. ನನಗೆ ಬ್ಯುಸಿನೆಸ್‍ನಲ್ಲಿ ಎಲ್ಲ ರೀತಿಯ ನಷ್ಟ ಉಂಟಾಗಿದ್ದು, ಇನ್ನೂ 91 ಲಕ್ಷ ರೂ. ಸಾಲ ಮರುಪಾವತಿಸಬೇಕಿದೆ. ಹೀಗಾಗಿ ಯಾರಿಗಾದರೂ ಕಿಡ್ನಿ ಅವಶ್ಯಕತೆ ಇದ್ದಲ್ಲಿ ನನ್ನನ್ನು ಸಂಪರ್ಕಿಸಿ ಎಂದು ಜಾಹೀರಾತಿನ ಮೂಲಕ ಮನವಿ ಮಾಡಿದ್ದಾರೆ.

ಖಾನ್ ಸರ್ಕಾರದಿಂದ ಮಾನ್ಯತೆ ಪಡೆದಿರುವ ಕಾಂಟ್ರ್ಯಾಕ್ಟರ್ ಆಗಿ ಸಹ ಕೆಲಸ ಮಾಡುತ್ತಿದ್ದಾರೆ. ಕಾಶ್ಮೀರದಲ್ಲಿ ಹೇರಲಾಗಿದ್ದ ಎರಡು ಬಾರಿಯ ಲಾಕ್‍ಡೌನ್‍ನಿಂದಾಗಿ ಭಾರೀ ನಷ್ಟ ಉಂಟಾಗಿದ್ದು, ಹೀಗಾಗಿ ಈ ನಿರ್ಧಾರ ಕೈಗೊಂಡಿದ್ದಾರೆ. 370ನೇ ವಿಧಿ ರದ್ದುಪಡಿಸಿದ ವೇಳೆ ಮೊದಲ ಬಾರಿಗೆ ಲಾಕ್‍ಡೌನ್ ವಿಧಿಸಲಾಗಿತ್ತು. ಬಳಿಕ ಕೊರೊನಾ ಮಹಾಮಾರಿಯಿಂದಾಗಿ ಎರಡನೇ ಬಾರಿ ಲಾಕ್‍ಡೌನ್ ವಿಧಿಸಲಾಗಿದೆ. ಹೀಗಾಗಿ ಖಾನ್‍ಗೆ ಭಾರೀ ಪ್ರಮಾಣದ ನಷ್ಟ ಉಂಟಾಗಿದೆ.

ಎಲ್ಲವನ್ನೂ ಕಳೆದುಕೊಂಡಿದ್ದು, ಸಾಲ ತೀರಿಸಲು ಹಣವಿಲ್ಲದೆ ಕಂಗಾಲಾಗಿದ್ದಾರೆ. ಅವರ ಕುಟುಂಬಕ್ಕೆ ಇವರೇ ಆಧಾರ. ಬ್ಯಾಂಕ್‍ನಲ್ಲಿ 61 ಲಕ್ಷ ಹಾಗೂ ಸ್ನೇಹಿತರ ಬಳಿ 30 ಲಕ್ಷ ರೂ. ಸಾಲ ಮಾಡಿದ್ದಾರೆ. ತನ್ನ ಕಿಡ್ನಿ ಮಾರುವ ನಿರ್ಧಾರದ ಕುರಿತು ಖಾನ್ ತಮ್ಮ ಮನೆಯವರಿಗೂ ತಿಳಿಸಿದ್ದಾರೆ.

ಖಾನ್ ತಮ್ಮ ಸಹ ಸಾಲ ತೀರಿಸಲು ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾರೆ. ಜಾಹೀರಾತು ಪೋಸ್ಟ್ ಮಾಡಿದ ಬಳಿಕ ಕೆಲವರು ಕಿಡ್ನಿ ಕೊಳ್ಳಲು ಕರೆ ಮಾಡಿದ್ದಾರೆ. ಒಬ್ಬರು 20 ಲಕ್ಷ ರೂ., ಮತ್ತೊಬ್ಬರು 25 ಲಕ್ಷ ರೂ.ಗೆ ಕೇಳಿದ್ದಾರೆ. ಆದರೆ ನಾನು ಇದಕ್ಕೆ ಒಪ್ಪಿಲ್ಲ. ಉತ್ತಮ ಬೆಲೆ ಸಿಗುವ ನಿರೀಕ್ಷೆಯಲ್ಲಿ ಕಾಯುತ್ತಿದ್ದೇನೆ ಎಂದು ಖಾನ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *