ರಾಂಚಿ: ನವ ವಿವಾಹಿತ ದಂಪತಿ ಹಾಗೂ ಇತರ ಮೂವರು ಚಲಿಸುತ್ತಿದ್ದ ಕಾರು ನದಿಗೆ ಬಿದ್ದಿದ್ದು, ಸ್ಥಳೀಯರು ಹರಸಾಹಸಪಟ್ಟು ಕೊಚ್ಚಿ ಹೋಗುತ್ತಿದ್ದ ಕಾರಿನಿಂದ ಐವರನ್ನು ರಕ್ಷಿಸಿದ್ದಾರೆ.

ಜಾರ್ಖಂಡ್‍ನ ಪಲಮು ಜಿಲ್ಲಿಯಲ್ಲಿ ಘಟನೆ ನಡೆದಿದ್ದು, ನದಿಗೆ ಬಿದ್ದ ತಕ್ಷಣ ಕಾರು ಕೊಚ್ಚಿ ಹೋಗಿದೆ. ಇದನ್ನು ಕಂಡ ಸ್ಥಳೀಯರು ರಭಸವಾಗಿ ಹರಿಯುತ್ತಿದ್ದ ನದಿಗೆ ಧುಮಿಕಿ ಕಾರಿನಲ್ಲಿದ್ದವರನ್ನು ರಕ್ಷಿಸಿದ್ದಾರೆ. ಸ್ಥಳೀಯರ ಗುಂಪು ನದಿಗೆ ಜಿಗಿದು, ಅರ್ಧ ಮುಳುಗಿದ್ದ ಕಾರಿನಿಂದ ಐವರನ್ನು ರಕ್ಷಿಸಿದ್ದಾರೆ. ಈ ಮೈನವಿರೇಳಿಸುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮದುವೆ ಸಮಾರಂಭ ಮುಗಿದ ಬಳಿಕ ದಂಪತಿ ಹಾಗೂ ಇತರ ಮೂವರು ವರನ ಮನೆಗೆ ಆಗಮಿಸುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ, ಮಲಾಯ್ ನದಿಯ ಸೇತುವೆ ಮೇಲಿಂದ ಕಾರು ನದಿಗೆ ಬಿದ್ದಿದೆ. ನಂತರ ಸುಮಾರು ಅರ್ಧ ಕಿಲೋಮೀಟರ್‍ನಷ್ಟು ನದಿಯಲ್ಲೇ ತೇಲಿಕೊಂಡು ಬಂದಿದ್ದು, ಇದನ್ನು ಕಂಡ ಸ್ಥಳೀಯರು ಕಾರಿನಲ್ಲಿದ್ದವರನ್ನು ರಕ್ಷಿಸಲು ಮುಂದಾಗಿದ್ದಾರೆ. ತಕ್ಷಣವೇ ನದಿಗೆ ಹಾರಿ ಕಾರಿನ ಬಾಗಿಲುಗಳನ್ನು ತೆರೆದು ಒಳಗಿದ್ದವರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಮುಂಗಾರು ಹಿನ್ನೆಲೆ ಜಾರ್ಖಂಡ್‍ನಲ್ಲಿ ವಿಪರೀತ ಮಳೆಯಾಗುತ್ತಿದ್ದು, ರಾಜ್ಯ ರಾಜಧಾನಿ ರಾಂಚಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ.

Leave a Reply