ನಡೆದುಕೊಂಡು ಹೋಗೋ ಹಕ್ಕು ಕೂಡ ಇಲ್ವಾ?- ಪೊಲೀಸರ ನಡೆಗೆ ರಾಹುಲ್ ಗಾಂಧಿ ಆಕ್ರೋಶ

ಲಕ್ನೋ: ಉತ್ತರ ಪ್ರದೇಶದ ಹತ್ರಾಸ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಂತ್ವಾನ ಹೇಳಲು ಮುಂದಾಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಗ್ರೇಟರ್ ನೋಯ್ಡಾ ಬಳಿಯೇ ತಡೆದ ಪೊಲೀಸರು ಬಳಿಕ ವಶಕ್ಕೆ ಪಡೆದಿದ್ದಾರೆ.

ದೆಹಲಿಯಿಂದ ಕಾರಿನಲ್ಲಿ ತೆರಳಿದ್ದ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರನ್ನು ಹತ್ರಾಸ್‍ಗೆ ಭೇಟಿ ನೀಡಲು ಪೊಲೀಸರು ಅಡ್ಡಪಡಿಸಿದ ಹಿನ್ನೆಲೆಯಲ್ಲಿ  ನಡೆದುಕೊಂಡು ಹೋಗಲು ಮುಂದಾಗಿದ್ದರು. ಈ ವೇಳೆ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾದ ಪರಿಣಾಮ ಪೊಲೀಸರು ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ವಶಕ್ಕೆ ಪಡೆದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ, ಪೊಲೀಸರು ತಮ್ಮನ್ನು ತಳ್ಳಿ ಲಾಠಿ ಚಾರ್ಜ್ ಮಾಡಿದ್ದಾರೆ. ಸಾಮಾನ್ಯ ವ್ಯಕ್ತಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಹಕ್ಕು ದೇಶದಲ್ಲಿ ಇಲ್ಲವೇ. ಕೇವಲ ಆರ್.ಎಸ್.ಎಸ್, ವಿಎಚ್‍ಪಿ ನಾಯಕರು ಮತ್ತು ಮೋದಿ ಒಬ್ಬರೇ ರಸ್ತೆಯಲ್ಲಿ ಹೋಗಬೇಕೆ ಎಂದು ಪ್ರಶ್ನಿಸಿದರು. ಇತ್ತ ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ. ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರನ್ನು ವಶಕ್ಕೆ ಪಡೆದ ಪೊಲೀಸರ ನಡೆಗೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೆಹಲಿಯಿಂದ 200 ಕಿಮೀ ದೂರದಲ್ಲಿರುವ ಉತ್ತರ ಪ್ರದೇಶದ ಹತ್ರಾಸ್ ಗ್ರಾಮದ 19 ವರ್ಷದ ದಲಿತ ಯುವತಿ ಇದೇ ತಿಂಗಳ 14ರಂದು ತನ್ನ ತಾಯಿಯೊಂದಿಗೆ ಹುಲ್ಲು ತರಲೆಂದು ಜಮೀನಿಗೆ ತೆರಳಿದ್ದಳು. ಈ ವೇಳೆ ನಾಲ್ವರು ಕಾಮಪಿಶಾಚಿಗಳು ಆಕೆಯನ್ನು ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದರು. ಅಲ್ಲದೇ ಆಕೆಯ ನಾಲಿಗೆಯನ್ನು ಕತ್ತರಿಸಿ, ಬೆನ್ನು ಮೂಳೆ, ಕತ್ತಿಗೆ ಗಂಭೀರವಾಗಿ ಹಾನಿ ಮಾಡಿದ್ದರು.

ಕಾಮುಕರ ಅಟ್ಟಹಾಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಪಡೆಯುತ್ತಿದ್ದಂತೆಯೇ ಘಟನೆ ನಡೆದು ಎರಡು ವಾರಗಳ ನಂತರ ಸೆ.29ರಂದು ಮೃತಪಟ್ಟಿದ್ದಳು. ಘಟನೆ ವಿರುದ್ಧ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಜನರು ಆಗ್ರಹಿಸಿದ್ದಾರೆ.

Comments

Leave a Reply

Your email address will not be published. Required fields are marked *