ನಡುಗಡ್ಡೆಯಲ್ಲಿ ಸಿಲುಕಿದ ಏಳು ಜನ- ಬೋಟ್‍ಗಳ ಮೂಲಕ ರಕ್ಷಣಾ ಕಾರ್ಯಾಚರಣೆಗೆ ಸಿದ್ಧತೆ

ವಿಜಯಪುರ: ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೆ ವರುಣನ ಅಬ್ಬರ ಜೋರಾಗಿದ್ದು, ಪ್ರವಾಹ ಪರಿಸ್ಥಿತಿಯಿಂದ ಜನ ಕಂಗಾಲಾಗಿದ್ದಾರೆ. ಇದೀಗ ನದಿಯ ನಡುಗಡ್ಡೆಯಲ್ಲಿ 7 ಜನ ಸಿಲುಕಿದ್ದು, ರಕ್ಷಣಾ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಜಿಲ್ಲೆಯ ತಾಳಿಕೋಟೆ ಪಟ್ಟಣದ ಬಳಿಯ ಡೋಣಿ ನದಿಯ ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದು ಸಹಾಯಕ್ಕಾಗಿ ಪರದಾಡುತ್ತಿದ್ದಾರೆ. ಇದ್ದಿಲು ತಯಾರಿಸಲು ಬಂದಿರುವ ಮಹಾರಾಷ್ಟ್ರ ಮೂಲದ ಏಳು ಜನ ಡೋಣಿ ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದು, ಏಳು ಜನರ ಪೈಕಿ ಐವರು ಮಕ್ಕಳಿರುವ ಮಾಹಿತಿ ಲಭ್ಯವಾಗಿದೆ.

ನದಿಯಲ್ಲಿ ಅಪಾಯ ಮಟ್ಟ ಮೀರಿ ಪ್ರವಾಹ ಬಂದರೂ ಹೊರ ಬಾರದೆ ನಡುಗಡ್ಡೆಯಲ್ಲಿ ಉಳಿದುಕೊಂಡಿದ್ದರು. ಪ್ರವಾಹ ಹೆಚ್ಚಾಗುತ್ತಿದ್ದಂತೆ ಹೊರ ಬರಲು ಸಾಧ್ಯವಾಗದೆ ಸ್ಥಳೀಯ ಅಧಿಕಾರಿಗಳಿಗೆ ಕರೆ ಮಾಡಿ ಸಹಾಯಯಾಚಿಸಿದ್ದಾರೆ. ಇದೀಗ ಏಳು ಜನರನ್ನು ಕರೆ ತರಲು ಬೋಟ್ ಗಳ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಗುರುವಾರ ರಾತ್ರಿಯೇ ಸ್ಥಳಕ್ಕೆ ಎಸಿ ಬಲರಾಮ ಲಮಾಣಿ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಂದು ನಡುಗಡ್ಡೆಯಲ್ಲಿ ಸಿಲುಕಿದವರ ರಕ್ಷಿಸಿ ಕರೆ ತರಲು ಕಂದಾಯ ಇಲಾಖೆ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸಿದ್ಧತೆ ಮಾಡಿಕೊಂಡಿದ್ದಾರೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭಾರೀ ಅನಾಹುತ ಸಂಭವಿಸಿದ್ದು, ನದಿ, ಹಳ್ಳಗಳು ತುಂಬಿ ಹರಿಯುತ್ತಿವೆ. ಇದರಿಂದಾಗಿ ಹಲವು ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ವಿಪರೀತ ಮಳೆಯಿಂದಾಗಿ ಜನ ಕಂಗಾಲಾಗಿದ್ದಾರೆ.

Comments

Leave a Reply

Your email address will not be published. Required fields are marked *