ನಡುಗಡ್ಡೆಯಲ್ಲಿ ಸಿಲುಕಿದವರಿಗೆ ಡ್ರೋನ್ ಮೂಲಕ ಔಷಧಿ, ಆಹಾರ

ರಾಯಚೂರು: ಜಿಲ್ಲೆಯ ಲಿಂಗಸುಗೂರಿನ ಕೃಷ್ಣಾ ನದಿಯ ನಡುಗಡ್ಡೆ ಕಡದರಗಡ್ಡಿಯಲ್ಲಿ ಸಿಲುಕಿರುವ ನಾಲ್ಕು ಜನ ಆಹಾರ, ಔಷಧಿ ಇಲ್ಲದೆ ಪರದಾಡುತ್ತಿರುವ ಹಿನ್ನಲೆ ಡ್ರೋನ್ ಬಳಸಿ ಅಗತ್ಯ ವಸ್ತುಗಳನ್ನು ರವಾನಿಸಲಾಗುತ್ತಿದೆ. ಜಿಲ್ಲಾಡಳಿತ ಸದ್ಯ ಡ್ರೋನ್ ಮೂಲಕ ಮಾತ್ರೆಗಳನ್ನು ರವಾನಿಸಿದ್ದು, ಆಹಾರ ನೀಡಲು ತಯಾರಿ ನಡೆಸಿದ್ದಾರೆ.

ನದಿಯಲ್ಲಿ ಕಲ್ಲು ಬಂಡೆ ಹೆಚ್ಚು ಇರುವುದರಿಂದ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಅಲ್ಲದೆ ನದಿಯಲ್ಲಿ ನೀರಿನ ಸೆಳೆತ ಕೂಡ ಹೆಚ್ಚಾಗಿದೆ. ಹೀಗಾಗಿ ರಕ್ಷಣಾ ಕಾರ್ಯಾಚರಣೆ ಸಾಧ್ಯವಾಗುತ್ತಿಲ್ಲ. ಜಾನುವಾರು ಹಾಗೂ ಜಮೀನಿಗಾಗಿ ನಾಲ್ಕು ಜನ ಗಡ್ಡೆಯಲ್ಲಿಯೇ ಉಳಿದಿದ್ದಾರೆ. ಈಗ ವಾಪಸ್ ಬರಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.

ನಾಲ್ವರ ಪೈಕಿ ತಿಪ್ಪಣ್ಣ ಅವರಿಗೆ ಪಾರ್ಶ್ವವಾಯು ಇರುವುದರಿಂದ ತುರ್ತು ಔಷಧಿ ಅಗತ್ಯವಿದೆ. ಅಲ್ಲದೆ ಮೈ-ಕೈ ನೋವು ಎಂದು ಹೇಳಿದ ಹಿನ್ನಲೆ ಡ್ರೋನ್ ಬಳಸಿ ಹದಿನೈದು ದಿನಗಳಿಗೆ ಆಗವಷ್ಟು ಮಾತ್ರೆಯನ್ನು ತಾಲೂಕು ಆಡಳಿತ ಕಳುಹಿಸಿಕೊಟ್ಟಿದೆ.

ಆಹಾರ ಪದಾರ್ಥಗಳನ್ನೂ ಸಹ ಡ್ರೋನ್ ಮೂಲಕ ಕಳುಹಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ರಾಯಚೂರು ಕೃಷಿ ವಿವಿಯಲ್ಲಿರುವ ದ್ರೋನ್ ನ್ನು ನಡುಗಡ್ಡೆಯ ಜನರಿಗಾಗಿ ಬಳಕೆ ಮಾಡಲಾಗಿದೆ. ಕೃಷಿ ವಿಶ್ವವಿದ್ಯಾಲಯದ ತಂತ್ರಜ್ಞರ ಮಾರ್ಗದರ್ಶನದಲ್ಲಿ ದ್ರೋನ್ ಬಳಕೆ ಮಾಡಲಾಗುತ್ತಿದೆ. ಜಮೀನಿನಲ್ಲಿನ ಬೆಳೆಗಳಿಗೆ ಔಷಧಿ ಸಿಂಪಡಣೆ ಮಾಡಲು ತಯಾರಿಸಿದ ಡ್ರೋನ್ ಮಾದರಿಯನ್ನು ಇದೇ ಪ್ರಥಮ ಬಾರಿಗೆ ನಡುಗಡ್ಡೆಯಲ್ಲಿದ್ದವರಿಗೆ ಸಹಾಯ ಮಾಡಲು ಬಳಸಲಾಗಿದೆ. ಸುಮಾರು ಐದು ಕೆ.ಜಿ.ತೂಕದ ವಸ್ತುಗಳನ್ನು ಹೊತ್ತೊಯ್ಯುವ  ಸಾಮರ್ಥ್ಯವನ್ನು ಈ ಡ್ರೋನ್ ಹೊಂದಿದೆ.

Comments

Leave a Reply

Your email address will not be published. Required fields are marked *