ನಟಿ ಸಂಜನಾ ಗಲ್ರಾನಿಗೂ ಕೊರೊನಾ ಪಾಸಿಟಿವ್

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಸಂಜನಾ ಗಲ್ರಾನಿ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.

ಈ ಕುರಿತು ನಟಿ ಕೊರೊನಾ ಟೆಸ್ಟ್ ಮಾಡಿಸಿರುವ ವೀಡಿಯೋವನ್ನು ಇನ್ ಸ್ಟಾದಲ್ಲಿ ಅಪ್ಲೋಡ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ. ಅಲ್ಲದೆ ಯಾವ ರೀತಿ ಮುಂಜಾಗ್ರತೆ ವಹಿಸಬೇಕು ಎಂಬುದನ್ನು ಕೂಡ ತಿಳಿಸಿದ್ದಾರೆ.

ನನಗೆ ಕೊರೊನಾ ಪಾಸಿಟಿವ್ ಬಂದಿದೆ. ನನ್ನ ಕುಟುಂಬದಲ್ಲಿಯೇ ವೈದ್ಯರು ಇದ್ದಾರೆ. ಅವರು ಕೊರೊನಾ ವಾರಿಯರ್ ಆಗಿದ್ದು, ಅವರು ಸಮಾಜಕ್ಕೆ ತಮ್ಮ ಸೇವೆ ನೀಡಲೇಬೇಕು. ನೀವು ಮನೆ ಬಿಟ್ಟು ಹೋಗಬೇಡಿ, ಸಮಾಜಸೇವೆ ಮಾಡಬೇಡಿ. ನಿಮ್ಮ ಸುರಕ್ಷತೆ ನೋಡಿಕೊಳ್ಳಿ ಅಂತ ನಾನು ಅವರಿಗೆ ಹೇಳುವುದಕ್ಕೆ ಸಾಧ್ಯವಿಲ್ಲ. ಸದ್ಯ ಸ್ವಲ್ಪ ಕೆಮ್ಮು ಇದೆ ಎಂದು ನಟಿ ಬರೆದುಕೊಂಡಿದ್ದಾರೆ.

ನನಗೆ 7ನೇ ತರಗತಿಯಿಂದಲೇ ಉಬ್ಬಸ ಇದೆ. ಹೀಗಾಗಿ ಮೊದಲೇ ಉಸಿರಾಟದ ಸಮಸ್ಯೆ ಇರುವುದರಿಂದ ನಾನು ಅಂದಿನಿಂದಲೂ ಅದಕ್ಕಾಗಿ ಪಂಪ್ ಬಳಸುತ್ತೇನೆ. ಮುಂದಿನ ದಿನಗಳಲ್ಲಿ ಕೊರೊನಾ ನನ್ನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲ್ಲ ಎಂದು ಭಾವಿಸುತ್ತೇನೆ. ಅಲ್ಲದೆ ನನ್ನಂತೆಯೇ ಉಸಿರಾಟದ ತೊಂದರೆ ಇರುವ ಕೊರೊನಾ ರೋಗಿಗಳಿಗೆ ಕೆಲವೊಂದು ವ್ಯಾಯಾಮಗಳನ್ನು ಈ ಸಮಯದಲ್ಲಿ ಹೇಳಿಕೊಡುವ ಪ್ರಯತ್ನ ಮಾಡುತ್ತೇನೆ. ಹೀಗಾಗಿ ದಯವಿಟ್ಟು ನಾನು ಅಪ್ಲೋಡ್ ಮಾಡುತ್ತಿರುವ ವೀಡಿಯೋಗಳನ್ನು ನೋಡಿ ಎಂದು ಹೇಳಿದ್ದಾರೆ.

ಇದೇ ವೇಳೆ ಮಣಿಪಾಲ್ ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ. ಸತ್ಯನಾರಾಯಣ್ ಅವರಿಗೆ ಸಂಜನಾ ಧನ್ಯವಾದಗಳನ್ನು ತಿಳಿಸಿದ್ದಾರೆ. ಕೆಲ ತಿಂಗಳ ಹಿಂದೆ ಸ್ಯಾಂಡಲ್‍ವುಡ್ ನಲ್ಲಿ ಡ್ರಗ್ಸ್ ಪ್ರಕರಣ ದೊಡ್ಡ ಬಿರುಗಾಳಿಯನ್ನೇ ಬೀಸಿತ್ತು. ಈ ಸಂಬಂಧ ನಟಿ ರಾಗಿಣಿ ದ್ವೇದೀ ಹಾಗೂ ಸಂಜನಾ ಜೈಲು ಪಾಲಾಗಿ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.

Comments

Leave a Reply

Your email address will not be published. Required fields are marked *