ನಟನೆ, ನಿರ್ದೇಶನ ಎರಡರಲ್ಲೂ ರಾಘು ಶಿವಮೊಗ್ಗ ಫುಲ್ ಬ್ಯುಸಿ

ಚೂರಿಕಟ್ಟೆ ಚಿತ್ರದ ಮೂಲಕ ಸ್ಯಾಂಡಲ್‍ವುಡ್ ಅಂಗಳದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡ ಪ್ರತಿಭೆ ರಾಘು ಶಿವಮೊಗ್ಗ. ರಂಗಭೂಮಿ ಮುಖಾಂತರ ಕಲಾ ಬದುಕು ಆರಂಭಿಸಿದ ಮಲೆನಾಡಿನ ಪ್ರತಿಭೆ ಈಗ ನಿರ್ದೇಶನದ ಜೊತೆ ನಟನೆಯಲ್ಲೂ ಬ್ಯುಸಿಯಾಗಿದ್ದಾರೆ. ಧಾರಾವಾಹಿಗಳಲ್ಲಿ ನಟನೆ, ಕಿರುಚಿತ್ರ, ಸಿನಿಮಾ ನಿರ್ದೇಶನದ ಮೂಲಕ ಕಿರುತೆರೆ, ಹಿರಿತೆರೆ ಎರಡರಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ ರಾಘು ಶಿವಮೊಗ್ಗ.

ರಂಗಭೂಮಿಯಲ್ಲಿ ಪ್ರಕಾಶ್ ಬೆಳವಾಡಿ ಗರಡಿಯಲ್ಲಿ ಬೆಳೆದ ರಾಘು ಶಿವಮೊಗ್ಗ ಧಾರಾವಾಹಿಗಳ ಮೂಲಕ ಕಿರುತೆರೆ ಜರ್ನಿ ಆರಂಭಿಸಿದ್ರು. ಮುಗಿಲು, ಮುಕ್ತ ಮುಕ್ತ, ಅರಸಿ, ನೂರೆಂಟು ಸುಳ್ಳು, ಮಂಜು ಮುಸುಕಿದ ಹಾದಿ ಸೇರಿದಂತೆ ಹತ್ತಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ಮುಂದೆ ಪ್ರೀತಿ ಪ್ರೇಮ, ಮದರಂಗಿ, ಜನುಮದ ಜೋಡಿ ಧಾರಾವಾಹಿಗಳಿಗೆ ನಿರ್ದೇಶನ ಮಾಡುವ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಿ ಕಿರುತೆರೆಯಲ್ಲಿ ಖ್ಯಾತಿ ಗಳಿಸಿದ್ದಾರೆ.

2015ರಲ್ಲಿ ಇವರ ನಿರ್ದೇಶನದಲ್ಲಿ ಬಂದ ಚೌಕಾಬಾರ ಕಿರುಚಿತ್ರ ಸಾಕಷ್ಟು ಜನಪ್ರಿಯತೆ ಹಾಗೂ ಖ್ಯಾತಿ ತಂದುಕೊಟ್ಟಿತು. ನಂತರ ಬೆಳ್ಳಿ
ತೆರೆಯಲ್ಲಿ ನಿರ್ದೇಶನದ ಅಗ್ನಿ ಪರೀಕ್ಷೆಗಿಳಿದ ರಾಘು ಶಿವಮೊಗ್ಗ ಚೂರಿಕಟ್ಟೆ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟು ಗೆಲುವಿನ ನಗೆ ಬೀರಿದ್ರು. ನಿರ್ದೇಶನ ಫೇವರೇಟ್ ಆದ್ರೂ ಸಿನಿಮಾಗಳ ನಟನೆಯಲ್ಲೂ ರಾಘು ಶಿವಮೊಗ್ಗ ಬ್ಯುಸಿಯಾಗಿದ್ದಾರೆ. ಸದ್ಯ ಇವರ ಕೈಯಲ್ಲಿ ಹಲವು ಸಿನಿಮಾಗಳಿದ್ದು, ಗುರುದೇಶ ಪಾಂಡೆ ನಿರ್ದೇಶನದ ‘ಪೆಂಟಗಾನ್’, ಜಯತೀರ್ಥ ನಿರ್ದೇಶನದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದಲ್ಲದೆ ಭಾಸ್ಕರ್ ನೀನಾಸಂ ನಿರ್ದೇಶನದ ‘ಸದ್ದು ವಿಚಾರಣೆ ನಡೆಯುತ್ತಿದೆ’ ಚಿತ್ರದಲ್ಲಿ ನೆಗೆಟಿವ್ ರೋಲ್ ನಲ್ಲಿ ರಾಘು ಶಿವಮೊಗ್ಗ ಬಣ್ಣ ಹಚ್ಚುತ್ತಿದ್ದಾರೆ.

ನಿರ್ದೇಶನದಲ್ಲಿ ಬ್ಲಾಕ್ ಕೋಬ್ರಾ ದುನಿಯಾ ವಿಜಿ ನಟನೆಯ ‘ಕುಸ್ತಿ’ ಚಿತ್ರ ಇವರ ಕೈಯಲ್ಲಿದ್ದು, ಇದರ ಬೆನ್ನಲ್ಲೇ ಮತ್ತೊಂದು ಹೊಸ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದು ಶೀಘ್ರದಲ್ಲೇ ಆ ಬಗ್ಗೆ ಮಾಹಿತಿ ನೀಡಲಿದ್ದಾರೆ. ಹೀಗೆ ನಿರ್ದೇಶನ ನಟನೆ ಎರಡರಲ್ಲೂ ಸಕ್ರಿಯರಾಗಿರುವ ರಾಘು ಶಿವಮೊಗ್ಗ ಮಲೆನಾಡಿನ ಪ್ರತಿಭೆ ಎನ್ನುವುದು ಹೆಮ್ಮೆಯ ವಿಚಾರ.

Comments

Leave a Reply

Your email address will not be published. Required fields are marked *