ನಕ್ಸಲ್ ಚಟುವಟಿಕೆ ಹತ್ತಿಕ್ಕಲು ಗಡಿಯಲ್ಲಿ ಕೂಬಿಂಗ್ ತೀವ್ರಗೊಳಿಸಲಾಗುವುದು: ಬೊಮ್ಮಾಯಿ

ಮಡಿಕೇರಿ: ರಾಜ್ಯ ಹಾಗೂ ಕೇರಳ ಗಡಿ ಭಾಗದಲ್ಲಿ ನಕ್ಸಲ್ ಚಟುವಟಿಕೆಗಳು ಸಕ್ರಿಯವಾಗಿರುವುದರಿಂದ ಜಿಲ್ಲೆಯ ಗಡಿಗಳಲ್ಲಿ ಕೂಬಿಂಗ್ ತೀವ್ರಗೊಳಿಸಲು ಸೂಚಿಸಿದ್ದೇನೆ ಎಂದು ಗೃಹಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ 2 ನಕ್ಸಲ್ ನಿಗ್ರಹ ಪಡೆಗಳು ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿವೆ. ಗಡಿ ಪ್ರದೇಶಗಳಲ್ಲಿ ನಕ್ಸಲ್ ಚಟುಚಟಿಕೆಗಳು ಸಕ್ರಿಯವಾಗಿರುವುದರಿಂದ ಮತ್ತೊಂದು ನಕ್ಸಲ್ ನಿಗ್ರಹ ಪಡೆಯನ್ನು ಕಾರ್ಯರೂಪಕ್ಕೆ ತರಲು ಸಿದ್ಧತೆ ನಡೆಸಿದ್ದು, ಆರ್ಥಿಕ ಇಲಾಖೆಯಿಂದ ಸಹಕಾರ ನೀಡುವಂತೆ ಹೇಳಿದ್ದೇನೆ ಎಂದರು.

ಭೂ ಕುಸಿತದಂತಹ ಸಂದರ್ಭದಲ್ಲಿ ಮತ್ತೊಂದು ಎಸ್‍ಡಿಆರ್ ಎಫ್ ಕಾರ್ಯಪಡೆಯನ್ನು ಅಸ್ತಿತ್ವಕ್ಕೆ ತರಲು ಸಂಬಂಧಪಟ್ಟ ಇಲಾಖೆಯೊಂದಿಗೆ ಮಾತನಾಡಿದ್ದೇನೆ. ಹೀಗಾಗಿ ಮೈಸೂರು ಭಾಗದಲ್ಲಿ ಶಾಶ್ವತವಾಗಿ ಎಸ್‍ಡಿಆರ್ ಎಫ್ ತಂಡ ಇರುವಂತೆ ಮಾಡಲಾಗುವುದು.

ಡ್ರಗ್ಸ್ ಮುಕ್ತ ರಾಜ್ಯಕ್ಕೆ ಪೊಲೀಸ್ ಇಲಾಖೆ ಪಣ ತೊಟ್ಟಿದೆ. ಈಗಾಗಲೇ ಡ್ರಗ್ಸ್ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಡ್ರಗ್ಸ್ ದಂಧೆಯನ್ನು ಮಟ್ಟ ಹಾಕುತ್ತಿದ್ದೇವೆ ಎಂದರು.

ಗೃಹ ಇಲಾಖೆ ವ್ಯಾಪ್ತಿಯ ವಿಚಾರಗಳು ಹಾಗೂ ಕಾರ್ಯ ದಕ್ಷತೆಯ ಬಗ್ಗೆ ಸಮಾಲೋಚನೆ ನಡೆಸಿದ್ದೇವೆ. ಪ್ರಮುಖವಾಗಿ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚಿಸಿದ್ದೇವೆ. ಕಳೆದ ಐದಾರು ತಿಂಗಳಿಂದ ಪೊಲೀಸ್ ಇಲಾಖೆ ಭೂಕುಸಿತ ಹಾಗೂ ಪ್ರವಾಹದ ಸಂದರ್ಭದಲ್ಲಿ ಎನ್‍ಡಿಆರ್‍ಎಫ್ ತಂಡ ಹಾಗೂ ಇತರೆ ಇಲಾಖೆಗಳೊಂದಿಗೆ ಉತ್ತಮವಾಗಿ ಕೆಲಸ ಮಾಡಿದೆ. ಕೊರೊನಾ ತಡೆಯುವಲ್ಲಿ ಯಶಸ್ವಿ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಭೌಗೋಳಿಕವಾಗಿ ಮನೆಗಳು ದೂರವಿರುವುದರಿಂದ ವಿಶೇಷವಾಗಿ ಕೊಲೆ ಹಾಗೂ ಅತ್ಯಾಚಾರಗಳ ಬಗ್ಗೆ ಗಮನಹರಿಸುವಂತೆ ಸೂಚಿಸಿದ್ದೇವೆ. ಜಿಲ್ಲೆಯ ರೆಸಾರ್ಟ್ ಮತ್ತು ಹೋಮ್ ಸ್ಟೇಗಳಲ್ಲಿ ಡ್ರಗ್ಸ್ ಮಾರಾಟ ದಂಧೆಗೆ ಕಡಿವಾಣ ಹಾಕಲು ಕ್ರಮ ವಹಿಸಲಾಗುವುದು. ಜಿಲ್ಲೆಯಲ್ಲಿ ಅಕ್ರಮ ಗೋಮಾಂಸ ಮಾರಾಟ ಸಾಗಾಟಕ್ಕೂ ಕ್ರಮ ವಹಿಸಲು ಸೂಚಿಸಿದ್ದೇವೆ ಎಂದರು.

Comments

Leave a Reply

Your email address will not be published. Required fields are marked *