ನಕ್ಕು ನಗಿಸುವ ಮನೋರಂಜನಾತ್ಮಕ ಸಿನಿಮಾ ಕೊಡೆಮುರುಗ

ಚಿತ್ರ: ಕೊಡೆಮುರುಗ
ನಿರ್ದೇಶನ: ಸುಬ್ರಮಣ್ಯ ಪ್ರಸಾದ್
ನಿರ್ಮಾಪಕ: ಕೆ.ರವಿ ಕುಮಾರ್, ಅಶೋಕ್ ಶಿರಾಲಿ
ಸಂಗೀತ ನಿರ್ದೇಶನ: ಎಂ.ಎಸ್. ತ್ಯಾಗರಾಜ
ಛಾಯಾಗ್ರಹಣ: ರುದ್ರಮುನಿ ಬೆಳಗೆರೆ
ತಾರಾಂಗಣ: ಮುನಿಕೃಷ್ಣ, ಸುಬ್ರಮಣ್ಯ ಪ್ರಸಾದ್, ಪಲ್ಲವಿ ಗೌಡ, ಕುರಿ ಪ್ರತಾಪ್, ಇತರರು
ರೇಟಿಂಗ್: 3.5/5

ಟ್ರೇಲರ್ ಮೂಲಕ ಸಂಚಲನ ಸೃಷ್ಟಿಸಿದ ಕೊಡೆಮುರುಗ ಸಿನಿಮಾ ಇಂದು ಬಿಡುಗಡೆಯಾಗಿದೆ. ಸಿನಿಮಾ ಎಂದಾಕ್ಷಣ ಎಲ್ಲರ ತಲೆಯಲ್ಲಿ ಮೂಡೋ ಇಮ್ಯಾಜಿನೇಷನ್ ಹ್ಯಾಂಡ್ ಸಂ ಹೀರೋ, ಚೆಂದದ ನಟಿ, ಕಣ್ಣು ಕೋರೈಸೋ ಲೋಕೇಷನ್, ಆಕ್ಷನ್ ಸೀಕ್ವೆಲ್ ಗಳ ಅಬ್ಬರ, ಕಲರ್ ಫುಲ್ ಹಾಡುಗಳು.. ಹೀಗೆ ಇನ್ನೂ ಏನೇನೋ ಇಮ್ಯಾಜಿನೇಷನ್. ಇದೆಲ್ಲ ಇದ್ದರೇನೆ ಸಿನಿಮಾ ಎನ್ನುವಷ್ಟರ ಮಟ್ಟಿಗೆ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗೆ ನಾವು ಹೊಂದಿಕೊಂಡಿದ್ದೇವೆ. ಆದರೆ ಕೊಡೆಮುರುಗ ಸಿನಿಮಾ ಈ ಎಲ್ಲಾ ರೂಲ್ಸ್ ಬ್ರೇಕ್ ಮಾಡಿ ಬೇರೆಯದ್ದೇ ರೀತಿಯ ಪ್ರಯತ್ನ ಇರುವ ಸಿನಿಮಾ.

ಸಿಂಪಲ್ ಕಂಟೆಂಟ್ ಕೊಡೆಮುರುಗ ಸಿನಿಮಾದ ಶಕ್ತಿ, ಸಿನಿಮಾದೊಳಗೊಂದು ಸಿನಿಮಾ ಕಥೆ ಚಿತ್ರದಲ್ಲಿದೆ. ಟೈಟಲ್‍ನಷ್ಟೇ ಸಿನಿಮಾ ಕಥೆ ಡಿಫ್ರೆಂಟ್ ಆಗಿ ಮೂಡಿ ಬಂದಿದೆ. ಸಿನಿಮಾ ಮಾಡಬೇಕು ಎಂದು ಅಪಾರ ಪ್ರೀತಿ ಇರುವ ನಿರ್ದೇಶಕನೊಬ್ಬ ಸಿನಿಮಾದಲ್ಲಿ ನಾಯಕನಾಗಲು ಲಾಯಕ್ಕಿಲ್ಲದ, ಹೀರೋ ಲುಕ್ಕೇ ಇರದ ವ್ಯಕ್ತಿಯನ್ನು ತನ್ನ ಸಿನಿಮಾಕ್ಕೆ ಹೀರೋ ಮಾಡಲು ಹೊರಡುತ್ತಾನೆ. ಆತನನ್ನು ಇಟ್ಟುಕೊಂಡು ಸಿನಿಮಾ ಮಾಡಲು ಹೊರಟಾಗ ಎದುರಿಸುವ ತಾಪತ್ರಯಳು ಒಂದಾ.. ಎರಡಾ. ಹೀಗೆ ಎದುರಿಸುವ ಸಮಸ್ಯೆಗಳನ್ನು ಔಟ್ ಅಂಡ್ ಔಟ್ ಕಾಮಿಡಿ ಕಥಾಹಂದರದ ಮೂಲಕ ನಿರ್ದೇಶಕ ಸುಬ್ರಮಣ್ಯ ಪ್ರಸಾದ್ ಕಟ್ಟಿಕೊಟ್ಟಿದ್ದಾರೆ.

ಪ್ರಾಯಶಃ ಗಾಂದೀನಗರದಲ್ಲಿ ಸಿನಿಮಾ ಮಾಡಲು ಬಂದ ಎಷ್ಟೋ ಮಂದಿಗೆ ಈ ಅನುಭವ ಆಗದೇ ಇರೋದಕ್ಕೆ ಸಾಧ್ಯವಿಲ್ಲ. ಅಂತಹ ಸೀರಿಯಸ್ ಎಳೆಯನ್ನು ಕಾಮಿಡಿಯಾಗಿ ಕಟ್ಟಿಕೊಡುವುದು ಸುಲಭದ ಮಾತೂ ಅಲ್ಲ. ಆ ವಿಷಯದಲ್ಲಿ ನಿರ್ದೇಶಕ ಸುಬ್ರಮಣ್ಯ ಪ್ರಸಾದ್ ಗೆದ್ದಿದ್ದಾರೆ. ಇತ್ತ ಹೀರೋ ಆದ ಮುರುಗ ಕೂಡ ಅಷ್ಟೇ ಚಾಲಾಕಿ. ಇದರ ನಡುವೆ ನಿರ್ದೇಶಕರನ್ನು ಯಾಮಾರಿಸುವ ಒಂದಿಷ್ಟು ಅವಕಾಶವಾದಿಗಳು ಇವರೆಲ್ಲರ ಉಪಟಳದಿಂದ, ವಂಚನೆಯಿಂದ ಬಸವಳಿದ ನಿರ್ದೇಶಕ ಹೇಗಾದರೂ ಸರಿ ಸಿನಿಮಾ ನಿರ್ದೇಶನ ಮಾಡಲೇಬೇಕು ಎಂದು ಒದ್ದಾಡುವ ಪರಿ ನೋಡುಗರನ್ನು ಮರುಗುವಂತೆ ಮಾಡುತ್ತೆ.

ನಿರ್ದೇಶಕ ಸುಬ್ರಮಣ್ಯ ಪ್ರಸಾದ್ ಸಿನಿಮಾದಲ್ಲಿ ನಟಿಸಿದ್ದು ಚಿತ್ರದ ಒಳಗೂ ಅವರದ್ದು ನಿರ್ದೇಶಕರ ಪಾತ್ರ. ಹೀರೋ ಆಗಿ ಮುನಿಕೃಷ್ಣ ಮುರುಗನ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿ ಪಲ್ಲವಿ ಗೌಡ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಎಲ್ಲಾ ಕಲಾವಿದರು ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಚಿತ್ರದ ಹಾಡುಗಳು ಸನ್ನಿವೇಶಕ್ಕೆ ತಕ್ಕಂತೆ ಸೊಗಸಾಗಿ ಮೂಡಿ ಬಂದಿದ್ದು, ಕ್ಯಾಮೆರಾ ಕೆಲಸ ಕೂಡ ಅಷ್ಟೇ ಚೆನ್ನಾಗಿ ತೆರೆ ಮೇಲೆ ಮೂಡಿ ಬಂದಿದೆ. ಒಟ್ಟಿನಲ್ಲಿ ಕೊಡೆಮುರುಗ ಸಿನಿಮಾ ಪ್ರೇಕ್ಷಕರಿಗೆ ಕಿಂಚಿತ್ತೂ ಬೇಸರ ತರಿಸಿದೆ ನಕ್ಕು ನಗಿಸುವ ಸಿನಿಮಾ ಎನ್ನಬಹುದು.

Comments

Leave a Reply

Your email address will not be published. Required fields are marked *