ಧೋನಿಯನ್ನು ಹೊಗಳಿ ಸಂಕಷ್ಟಕ್ಕೆ ಸಿಲುಕಿದ ಪಾಕ್ ಮಾಜಿ ಕ್ರಿಕೆಟಿಗ

ಇಸ್ಲಾಮಾಬಾದ್: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಯನ್ನು ಹೊಗಳಿ ಪಾಕಿಸ್ತಾನ ಮಾಜಿ ಸ್ಪಿನ್ನರ್ ಸಕ್ಲೈನ್ ಮುಷ್ತಾಕ್ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಆ.15 ರಂದು ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದ ಧೋನಿ ಕುರಿತು ತಮ್ಮ ಯೂಟ್ಯೂಬ್ ಚಾನೆಲ್‍ನಲ್ಲಿ ಮಾತನಾಡಿದ್ದ ಮುಷ್ತಾಕ್, ವಿದಾಯ ಪಂದ್ಯ ಏರ್ಪಡಿಸದ ಬಿಸಿಸಿಐ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಧೋನಿರಂತಹ ದಿಗ್ಗಜ ಕ್ರಿಕೆಟಿಗರನ್ನು ಈ ರೀತಿ ನಡೆಸಿಕೊಳ್ಳುತ್ತೀರಾ? ಹಲವು ಅಭಿಮಾನಿಗಳು ಧೋನಿಗೆ ವಿದಾಯ ಪಂದ್ಯ ಏರ್ಪಡಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ ಎಂದು ಹೇಳಿದ್ದರು.

ಧೋನಿರನ್ನು ಹೊಗಳಿದ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಮುಷ್ತಾಕ್ ಗದರಿದೆ. ಭಾರತ ಹಾಗೂ ಪಾಕ್ ನಡುವೆ ಎದುರಾಗಿರುವ ಸಂದಿಗ್ಧ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪಿಸಿಬಿ ಈ ಹಿಂದೆಯೇ ಆಟಗಾರರು, ಕೋಚ್, ಸಹಾಯಕ ಸಿಬ್ಬಂದಿಗೆ ಕೆಲ ಆದೇಶಗಳನ್ನು ಜಾರಿ ನೀಡಿತ್ತು. ಭಾರತ ಕ್ರಿಕೆಟ್ ಆಟಗಾರರು ಮತ್ತು ಬಿಸಿಸಿಐ ಕುರಿತು ಯಾವುದೇ ರೀತಿಯ ವಿಮರ್ಶೆ, ಕಾಮೆಂಟ್ ಮಾಡದಂತೆ ನಿರ್ದೇಶನ ನೀಡಿತ್ತು. ಸದ್ಯ ಪಾಕಿಸ್ತಾನ ಕ್ರಿಕೆಟಿಗರ ಡೆವಲಪ್‍ಮೆಂಟ್ ಹೆಡ್ ಆಗಿ ಪಿಸಿಬಿಯಲ್ಲಿ ಮುಷ್ತಾಕ್ ಕಾರ್ಯನಿರ್ವಹಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಪಿಸಿಬಿ ಮುಷ್ತಾಕ್ ಅವರನ್ನು ಪಿಸಿಬಿ ಗದರಿದೆ.

ಈ ಕುರಿತು ಮಾತನಾಡಿರುವ ಪಿಸಿಬಿ ಅಧಿಕಾರಿಯೊಬ್ಬರು, ಧೋನಿಯನ್ನು ಹೊಗಳಿ ಬಿಸಿಸಿಐ ವಿರುದ್ಧ ವಿಮರ್ಶೆ ಮಾಡಿದ ಮುಷ್ತಾಕ್ ಅವರ ನಡೆ ಸರಿಯಲ್ಲ. ಪಾಕ್ ತಂಡದೊಂದಿಗೆ ಕೆಲಸ ಮಾಡುತ್ತಿರುವ ಕೋಚ್‍ಗಳು ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ. ಆದ್ದರಿಂದ ಪಿಸಿಬಿ ಉದ್ಯೋಗಿಗಳು ಯೂಟ್ಯೂಬ್ ಚಾನೆಲ್ ನಡೆಸದಂತೆ ಹೊಸ ಆದೇಶವನ್ನು ಜಾರಿ ಮಾಡಲಾಗಿದೆ. ಯಾವುದೇ ಚಾನೆಲ್‍ಗೆ ಸಂದರ್ಶನ ನೀಡುವ ಮುನ್ನ ಪಿಸಿಬಿ ಅನುಮತಿ ಪಡೆಯುವುದು ಕಡ್ಡಾಯ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *