ಧಾರವಾಡದಲ್ಲಿ ವಿದ್ಯಾರ್ಥಿಗಳಿಗೆ ಕೊರೊನಾ- ಪರೀಕ್ಷೆ ಸಮಯದಲ್ಲೇ ವಕ್ಕರಿಸಿದ ಸೋಂಕು

– ಬಸ್ ಇಲ್ಲದ್ದಕ್ಕೆ ಕರ್ನಾಟಕ ವಿವಿ ಪರೀಕ್ಷೆ ಮುಂದೂಡಿಕೆ

ಧಾರವಾಡ: ವಿದ್ಯಾಕಾಶಿಯಲ್ಲಿ ವಿದ್ಯಾರ್ಥಿಗಳಲ್ಲಿ ಕೊರೊನಾ ಸೊಂಕು ಹೆಚ್ಚು ಕಂಡು ಬರುತ್ತಿದೆ. ಇಷ್ಟು ದಿನ ಕಾಲೇಜುಗಳಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದ್ದವು. ಆದರೆ ಇದೀಗ ಹಾಸ್ಟೆಲ್‍ಗೂ ಮಹಾಮಾರಿ ಒಕ್ಕರಿಸಿಕೊಳ್ಳುತ್ತಿದೆ.

ಸಪ್ತಾಪುರದಲ್ಲಿರುವ ಗೌರಿಶಂಕರ ಹಾಸ್ಟೆಲ್‍ನ 10, ಕೆಸಿಡಿ ಕಾಲೇಜಿನಲ್ಲಿರುವ ಕಾವೇರಿ ಹಾಸ್ಟೆಲ್‍ನಲ್ಲಿ 7 ಹಾಗೂ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ 13 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದೆ. ಈ ಹಿನ್ನೆಲೆ ಪರೀಕ್ಷೆ ಸಮಯದಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಸೋಂಕು ಹರಡದಂತೆ ನೋಡಿಕೊಳ್ಳಲು ಜಿಲ್ಲಾಡಳಿತ ಎಲ್ಲ ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದೆ. ಮತ್ತೊಂದು ಕಡೆ ಬಿವಿಬಿ ಕಾಲೇಜಿನಲ್ಲಿ ಪರೀಕ್ಷೆ ನಡೆಯುತ್ತಿರುವುದರಿಂದ ಸೋಂಕಿತರಿಗೆ ಪ್ರತ್ಯೇಕ ಪರೀಕ್ಷಾ ಕೊಠಡಿ ಮಾಡಲಾಗಿದೆ.

ಹಾಸ್ಟೆಲ್‍ಗಳಲ್ಲಿರುವ ಕೊರೊನಾ ಸೋಂಕಿತ ವಿದ್ಯಾರ್ಥಿಗಳಿಗೆ ಅಲ್ಲೇ ಐಸೋಲೇಷನ್ ಮಾಡಲಾಗುತ್ತಿದೆ. ರೋಗಲಕ್ಷಣ ಕಂಡು ಬಂದರೆ ಮಾತ್ರ ಅವರಿಗೆ ಆಸ್ಪತ್ರೆಗೆ ಕಳಿಸುವ ಕೆಲಸ ನಡೆದಿದೆ. ಕರ್ನಾಟಕ ವಿವಿ ವ್ಯಾಪ್ತಿಗೆ ಬರುವ ಕಾವೇರಿ ಹಾಸ್ಟೇಲ್‍ನಲ್ಲಿ ವಿದ್ಯಾರ್ಥಿನಿಯರೇ ಇದ್ದು, ಕೆಲವರನ್ನು ಪೋಷಕರು ವಾಪಸ್ ಕರೆದುಕೊಂಡು ಹೋಗಿದ್ದಾರೆ. ರೋಗ ಲಕ್ಷಣ ಇಲ್ಲದೆಯೇ ಸೊಂಕು ಬರುತಿದ್ದು, ಆರ್ಟಿಪಿಸಿಆರ್ ಮಾಡಿದ ವರದಿ ಬಳಿಕ ಸೋಂಕು ಇರುವದು ಗೊತ್ತಾಗುತ್ತಿದೆ.

ಕಳೆದ ವಾರವಷ್ಟೇ ಧಾರವಾಡದ ಎಸ್‍ಡಿಎಂ ಇಂಜಿನಯರಿಂಗ್ ಕಾಲೇಜಿನಲ್ಲಿ 15 ಹಾಗೂ ಹುಬ್ಬಳ್ಳಿಯ ವಿದ್ಯಾನಿಕೇತನ ಕಾಲೇಜಿನಲ್ಲಿ 15 ವಿದ್ಯಾರ್ಥಿಗಳಿಗೆ ಕೊವಿಡ್ ಪತ್ತೆಯಾಗಿತ್ತು.

ಮೂರನೇ ಬಾರಿಗೆ ವಿವಿ ಪರೀಕ್ಷೆ ಮುಂದೂಡಿಕೆ
ಕರ್ನಾಟಕ ವಿಶ್ವವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಮತ್ತೆ ಮುಂದೂಡಲಾಗಿದೆ. ಕಳೆದ ಒಂದು ವಾರದಲ್ಲಿ ಮೂರನೇ ಬಾರಿಗೆ ಪರೀಕ್ಷೆಗಳನ್ನು ಮುಂದೂಡಿ ಕರ್ನಾಟಕ ವಿವಿ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಸಾರಿಗೆ ಬಸ್ ಆರಂಭವಾಗಬಹುದು ಎಂಬ ಉದ್ದೇಶದಿಂದ ಪದೇ ಪದೇ ಪರೀಕ್ಷೆ ಮುಂದೂಡಲಾಗುತ್ತಿದೆ ಎಂದು ಕಾರಣ ನೀಡಿದ್ದಾರೆ. ಸೋಮವಾರ ಹಾಗೂ ಮಂಗಳವಾರದ ಎರಡು ದಿನ ನಡೆಯಬೇಕಿದ್ದ ಪರೀಕ್ಷೆ ಮುಂದೂಡಿದ ಕರ್ನಾಟಕ ವಿವಿ, ಮುಂದಿನ ದಿನಾಂಕ ಪ್ರಕಟ ಮಾಡುವದಾಗಿ ತಿಳಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ಕರ್ನಾಟಕ ವಿವಿ ಕುಲಪತಿ ಕೆ.ಬಿ.ಗುಡಸಿ, ಗ್ರಾಮೀಣ ಭಾಗದಿಂದ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಇಲ್ಲದೇ ಇರುವುದರಿಂದ ಪರೀಕ್ಷೆ ನಡೆಸುತ್ತಿಲ್ಲ, ಬಸ್ ಆರಂಭಕ್ಕಾಗಿ ಕಾಯುತಿದ್ದೇವೆ, ಒಮ್ಮೆ ಬಸ್ ಆರಂಭವಾದರೆ ಪರೀಕ್ಷೆ ಮುಗಿಸುವದಾಗಿ ತಿಳಿಸಿದರು.

Comments

Leave a Reply

Your email address will not be published. Required fields are marked *