ಧವನ್ ಭರ್ಜರಿ ಆಟ, 6 ವಿಕೆಟ್‌ಗಳ ಜಯ – 2ನೇ ಸ್ಥಾನಕ್ಕೆ ಜಿಗಿದ ಡೆಲ್ಲಿ

ಮುಂಬೈ: ಶಿಖರ್ ಧವನ್ ಅವರ ಸ್ಫೋಟಕ ಆಟದಿಂದ ಡೆಲ್ಲಿ ಕ್ಯಾಪಿಟಲ್ಸ್ ಪಂಜಾಬ್ ಕಿಂಗ್ಸ್ ವಿರುದ್ಧ 6 ವಿಕೆಟ್‌ಗಳ ಜಯವನ್ನು ಸಾಧಿಸಿದೆ.

ಗೆಲ್ಲಲು 196 ರನ್‌ಗಳ ಕಠಿಣ ಗುರಿಯನ್ನು ಪಡೆದ ಡೆಲ್ಲಿ 18.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 198 ರನ್ ಹೊಡೆದು ಜಯಶಾಲಿಯಾಯಿತು. ಮೂರು ಪಂದ್ಯವಾಡಿ ಎರಡರಲ್ಲಿ ಜಯ ಸಾಧಿಸಿದ ಡೆಲ್ಲಿ ಅಂಕಪಟ್ಟಿಯಲ್ಲಿ ಮುಂಬೈಯನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೆ ಜಿಗಿದಿದೆ. ಪ್ರಥಮ ಸ್ಥಾನದಲ್ಲಿ ಆರ್‌ಸಿಬಿ ಇದೆ.

ಆರಂಭಿಕ ಆಟಗಾರ ಪೃಥ್ವಿ ಶಾ ಮತ್ತು ಶಿಖರ್ ಧವನ್ ಮೊದಲ ವಿಕೆಟ್‌ಗೆ 59 ರನ್ ಜೊತೆಯಾಟವಾಡಿ ಉತ್ತಮ ಅಡಿಪಾಯ ಹಾಕಿದರು. ಪೃಥ್ವಿ ಶಾ 32 ರನ್(17 ಎಸೆತ, 3 ಬೌಂಡರಿ, 2 ಸಿಕ್ಸರ್) ಹೊಡೆದರೆ, ಸ್ಟೀವ್ ಸ್ಮಿತ್ 9 ರನ್ ಗಳಿಸಿ ಔಟಾದರು.

14.5 ಓವರ್‌ನಲ್ಲಿ ತಂಡದ ಮೊತ್ತ 152 ಆಗಿದ್ದಾಗ ಶಿಖರ್ ಧವನ್ ಔಟಾದರು. ಸ್ಫೋಟಕ 92 ರನ್ (48 ಎಸೆತ, 13 ಬೌಂಡರಿ, 2 ಸಿಕ್ಸರ್) ಸಿಡಿಸಿ ತಂಡವನ್ನು ಗೆಲುವಿನ ಬಾಗಿಲ ಬಳಿ ತಂದು ಧವನ್ ಔಟಾದರು. ರಿಷಭ್ ಪಂತ್ 15 ರನ್ ಹೊಡೆದರೆ ಮಾರ್ಕಸ್ ಸ್ಟೋಯಿನ್ಸ್ ಔಟಾಗದೇ 27 ರನ್(13 ಎಸೆತ, 3 ಬೌಂಡರಿ, 1 ಸಿಕ್ಸರ್), ಲಲಿತ್ ಯಾದವ್ ಔಟಾಗದೇ 12 ರನ್(6 ಎಸೆತ, 1 ಬೌಂಡರಿ) ಹೊಡೆದು ತಂಡಕ್ಕೆ ಜಯವನ್ನು ತಂದುಕೊಟ್ಟರು.

122 ರನ್‌ಗಳ ಜೊತೆಯಾಟ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಂಜಾಬ್ ಕಿಂಗ್ಸ್ ಭರ್ಜರಿ ಆರಂಭವನ್ನು ಪಡೆದುಕೊಂಡಿತು. ಕೆ.ಎಲ್ ರಾಹುಲ್ 61 ರನ್(51 ಎಸೆತ, 7 ಬೌಂಡರಿ, 2 ಸಿಕ್ಸರ್) ಮತ್ತು ಮಯಾಂಕ್ ಅಗರ್ ವಾಲ್ 69 ರನ್ (36 ಎಸೆತ, 7 ಬೌಂಡರಿ,4 ಸಿಕ್ಸರ್) ಸಿಡಿಸಿ ಮೊದಲ ವಿಕೆಟ್‌ಗೆ ಆರಂಭಿಕ ಜೋಡಿ 77 ಎಸೆತದಲ್ಲಿ 122 ರನ್ ಕಲೆ ಹಾಕಿತು. ಈ ಜೋಡಿಯನ್ನು ಬೇರ್ಪಡಿಸಲು ಡೆಲ್ಲಿಯ ಬೌಲರ್‌ಗಳು ಪರದಾಟ ನಡೆಸಿದರು.

12ನೇ ಓವರ್ ಎಸೆಯಲು ಮುಂದಾದ ಕಗಿಸೋ ರಬಾಡ ಮಯಾಂಕ್ ವಿಕೆಟ್ ಕಬಳಿಸುವ ಮೂಲಕ ರನ್ ವೇಗಕ್ಕೆ ಕಡಿವಾಣ ಹಾಕಿದರು. ನಂತರ ಬಂದ ಕ್ರೀಸ್ ಗೇಲ್ 11 ರನ್( 9 ಎಸೆತ, 1 ಸಿಕ್ಸ್) ಸಿಡಿಸಿ ಬಂದಷ್ಟೇ ವೇಗವಾಗಿ ಪೇವಿಲಿಯನ್ ಸೇರಿಕೊಂಡರು. ನಂತರ ಸ್ಲಾಗ್ ಓವರ್‌ಗಳಲ್ಲಿ ಬಿಂದಾಸ್ ಆಗಿ ಬ್ಯಾಟ್ ಬೀಸಿದ ದೀಪಕ್ ಹೂಡ 22 ರನ್( 13 ಎಸೆತ, 2 ಸಿಕ್ಸರ್) ಮತ್ತು ಶಾರುಖ್ ಖಾನ್ 15 ರನ್ (5 ಎಸೆತ, 2 ಬೌಂಡರಿ, 1 ಸಿಕ್ಸರ್) ಸಿಡಿಸಿ ಪಂಜಾಬ್ ತಂಡದ ರನ್ 190ರ ಗಡಿ ದಾಟುವಂತೆ ನೋಡಿಕೊಂಡರು. ಅಜೇಯರಾಗಿ ಉಳಿದ ಈ ಜೋಡಿ 5ನೇ ವಿಕೆಟ್‌ಗೆ 7 ಎಸೆತದಲ್ಲಿ 16 ರನ್‌ಗಳ ಜೊತೆಯಾಟವಾಡಿತು.

ಡೆಲ್ಲಿ ಪರ ಬೌಲಿಂಗ್ ಮಾಡಿದ 6 ಜನ ಬೌಲರ್ಸ್ ಕೂಡ ದುಬಾರಿಯಾದರು. ಕ್ರೀಸ್ ವೋಕ್ಸ್, ಅವೇಶ್ ಖಾನ್, ಕಗಿಸೋ ರಬಾಡ ಮತ್ತು ಲುಕ್ಮನ್ ಮೆರಿವಾಲಾ ತಲಾ ಒಂದು ವಿಕೆಟ್ ಪಡೆದರು.

Comments

Leave a Reply

Your email address will not be published. Required fields are marked *