ಧರ್ಮೇಗೌಡ ಕೇಸ್- ಉನ್ನತ ಮಟ್ಟದ ತನಿಖೆಗೆ ಲೋಕಸಭಾ ಸ್ಪೀಕರ್ ಆಗ್ರಹ

– ಸ್ವತಂತ್ರ ಸಂಸ್ಥೆ ಮೂಲಕ ಉನ್ನತ ಮಟ್ಟದ ತನಿಖೆ

ನವದೆಹಲಿ: ವಿಧಾನ ಪರಿಷತ್ ಮಾಜಿ ಉಪ ಸಭಾಪತಿ ಎಸ್.ಎಲ್.ಧರ್ಮೇಗೌಡ ಆತ್ಮಹತ್ಯೆ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಸೂಕ್ತ ತನಿಖೆ ನಡೆಸುವಂತೆ ಹಲವರು ಆಗ್ರಹಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಇದೀಗ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಉನ್ನತ ಮಟ್ಟದ ತನಿಖೆ ಅಗತ್ಯ ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡುವ ಮೂಲಕ ಅವರು ಸಂತಾಪ ಸೂಚಿಸಿದ್ದು, ಸ್ವತಂತ್ರ ಸಂಸ್ಥೆ ಮೂಲಕ ಉನ್ನತ ಮಟ್ಟದ ತನಿಖೆ ನಡೆಸುವಂತೆ ತಿಳಿಸಿದ್ದಾರೆ. ಕರ್ನಾಟಕ ವಿಧಾನ ಪರಿಷತ್ ಮಾಜಿ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಅವರ ಸಾವು ತೀವ್ರ ದುಃಖವನ್ನುಂಟು ಮಾಡಿದೆ. ಅವರ ಕುಟುಂಬಕ್ಕೆ ನಾನು ಸಂತಾಪ ಸೂಚಿಸುತ್ತೇನೆ ಎಂದು ಎಂದಿದ್ದಾರೆ.

ಅವರು ಉಪಾಧ್ಯಕ್ಷರಾಗಿದ್ದಾಗ ಸದನದಲ್ಲಿ ನಡೆದ ದುರದೃಷ್ಟಕರ ಘಟನೆ ಪ್ರಜಾಪ್ರಭುತ್ವದ ಮೇಲಿನ ಗಂಭೀರ ದಾಳಿಯಾಗಿದೆ. ಅವರ ಸಾವಿನ ಕುರಿತು ಸ್ವತಂತ್ರ ಸಂಸ್ಥೆ ಮೂಲಕ ಉನ್ನತಮಟ್ಟದ ತನಿಖೆ ನಡೆಸುವುದು ಅವಶ್ಯಕ. ಶಾಸಕಾಂಗ ಸಂಸ್ಥೆಗಳ ಪ್ರತಿಷ್ಠೆ ಹಾಗೂ ಘನತೆ ಹಾಗೂ ಅಧ್ಯಕ್ಷರ, ಅಧಿಕಾರಿಗಳ ಸ್ವಾತಂತ್ರ್ಯ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಓಂ ಬಿರ್ಲಾ ತಮ್ಮ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

ನಡೆದಿದ್ದೇನು..?
ಎಸ್.ಎಲ್ ಧರ್ಮೇಗೌಡ ಅವರು ಮಂಗಳವಾರ ಸಂಜೆ 6.30ರ ಸುಮಾರಿಗೆ ಗುಣಸಾಗರಕ್ಕೆ ಆಗಮಿಸಿದ್ದರು. ಸಖರಾಯಪಟ್ಟಣದ ಮನೆಯಿಂದ ಡ್ರೈವರ್ ಜೊತೆ ಕಾರಿನಲ್ಲಿ ಬಂದಿದ್ದ ಅವರು, ರೈಲ್ವೆ ಟ್ರ್ಯಾಕ್ ಬಳಿ ಕಾರನ್ನ ನಿಲ್ಲಿಸಲು ಡ್ರೈವರಿಗೆ ಸೂಚನೆ ನೀಡಿದ್ದಾರೆ. ಇತ್ತ ರೈಲ್ವೆ ಹಳಿಯತ್ತ ಬರುವಾಗ ಹಳ್ಳಿಗರನ್ನ ಮಾತನಾಡಿಸಿ ಬಂದಿದ್ದರು. ಅಲ್ಲದೆ ನನಗೆ ಒಬ್ಬರ ಜೊತೆ ಖಾಸಗಿಯಾಗಿ ಮಾತನಾಡಬೇಕು, ನೀನು ಹೋಗು ಅಂತ ಚಾಲಕನನ್ನು ಕಳುಹಿಸಿದ್ದಾರೆ. ಆ ಬಳಿಕ ಕಡೂರಿನ ವ್ಯಕ್ತಿಯೊಬ್ಬರಿಗೆ ಫೋನ್ ಮಾಡಿ ಜನಶತಾಬ್ದಿ ರೈಲು ಬರುವ ಸಮಯವನ್ನು ವಿಚಾರಿಸಿದ್ದಾರೆ. ನಂತರ ತಮ್ಮ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದರು.

ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಬಂದು ರೈಲಿಗೆ ತಲೆಕೊಟ್ಟು ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯಿಂದ ಧರ್ಮೇಗೌಡ ಅವರ ಮೃತದೇಹ ಛಿದ್ರಗೊಂಡಿದ್ದು, ಸುಮಾರು 100 ಮೀಟರ್ ದೂರದಲ್ಲಿ ಕೈ ಪತ್ತೆಯಾಗಿದೆ. ಪರಿಷತ್‍ನಲ್ಲಿ ನಡೆದ ಗಲಾಟೆಯಿಂದ ಮನಸ್ಸಿಗೆ ನೋವಾಗಿದೆ. ಮನೆಯಲ್ಲಿನ ಆಸ್ತಿ ವಿಚಾರ, ಹಣಕಾಸು ಸಂಬಂಧ ಡೆತ್‍ನೋಟ್‍ನಲ್ಲಿ ಬರೆದಿದ್ದಾರೆ. ಅಲ್ಲದೆ ಪತ್ನಿ ಮಮತಾ, ಮಗ, ಮಗಳಲ್ಲಿ ಕ್ಷಮೆ ಕೂಡ ಕೇಳಿದ್ದು, ಮನೆಯನ್ನು ಪೂರ್ಣಗೊಳಿಸುವಂತೆ ಸೂಚನೆ ಕೂಡ ನೀಡಿದ್ದಾರೆ.

Comments

Leave a Reply

Your email address will not be published. Required fields are marked *