ದೇಶ ರಕ್ಷಣೆ ಮಾಡಿದ ಯೋಧರ ಸಾಹಸಗಾಥೆ ಯುವ ಪೀಳಿಗೆಗೆ ಸ್ಪೂರ್ತಿ – ಕಾರ್ಗಿಲ್ ಹುತಾತ್ಮರಿಗೆ ಸಿಎಂ ನಮನ

ಬೆಂಗಳೂರು: ಇಡೀ ದೇಶ ರಕ್ಷಣೆ ಮಾಡಿದ ಯೋಧರ ಸಾಹಸಗಾಥೆ ಯುವ ಪೀಳಿಗೆಗೆ ಎಂದಿಗೂ ಸ್ಪೂರ್ತಿ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಕಾರ್ಗಿಲ್ ಹುತಾತ್ಮರಿಗೆ ನಮನ ಸಲ್ಲಿಸಿದ್ದಾರೆ.

ಇಂದು ಕಾರ್ಗಿಲ್ ವಿಜಯ್ ದಿವಸ್. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಾರ್ಗಿಲ್ ಹುತಾತ್ಮರಿಗೆ ನಮನ ಸಲ್ಲಿಸಿದ್ದಾರೆ. ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಿಂದ ಕಾರ್ಗಿಲ್ ವಿಜಯ್ ದಿವಸ್ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಿಎಂ ಯಡಿಯೂರಪ್ಪ ಅವರಿಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಾಥ್ ನೀಡಿದ್ದರು.

ಕಾರ್ಗಿಲ್ ವಿಜಯ್ ದಿವಸ್ ಉದ್ದೇಶಿಸಿ ಮಾತನಾಡಿದ ಸಿಎಂ ಯಡಿಯೂರಪ್ಪ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಿಂದ ಆಯೋಜಿಸಿರುವ ಕಾರ್ಗಿಲ್ ವಿಜಯ್ ದಿವಸ್‍ನಲ್ಲಿ ಹೆಮ್ಮೆಯಿಂದ ಪಾಲ್ಗೊಂಡಿದ್ದೇನೆ. ಭಾರತ ಮಾತೆಯ ರಕ್ಷಣೆಗಾಗಿ ತಮ್ಮ ಜೀವವನ್ನೇ ಸಮರ್ಪಿಸಿಕೊಂಡ ಭಾರತೀಯ ಯೋಧರ ಶೌರ್ಯ ಮತ್ತು ತ್ಯಾಗಕ್ಕೆ ಸದಾ ಕೃತಜ್ಞರಾಗಿದ್ದೇವೆ ಎಂದರು.

ನಮ್ಮ ದೇಶದ ಅವಿಭಾಜ್ಯ ಅಂಗವಾದ ಜಮ್ಮು ಮತ್ತು ಕಾಶ್ಮೀರದಲ್ಲಿನ ಕಾರ್ಗಿಲ್ ಪ್ರದೇಶವನ್ನು ಪಾಕಿಸ್ತಾನದ ಸೇನಾ ಪಡೆಗಳು 1999ರಲ್ಲಿ ಆಕ್ರಮಿಸಿಕೊಂಡಿದ್ದವು. ಆಗ ನಮ್ಮ ಯೋಧರು 1999 ರ ಮೇ 5 ರಿಂದ ಜುಲೈ 26 ವರೆಗೆ ಸತತ ಹೋರಾಟ ನಡೆಸಿ ಈ ಪ್ರದೇಶವನ್ನು ವಶಪಡಿಸಿಕೊಂಡರು. ಕೊನೆಗೆ ಶತ್ರುಗಳನ್ನು ಹಿಮ್ಮೆಟ್ಟಿಸಿ ನಮ್ಮ ಯೋಧರು ವಿಜಯಿಯಾದರು ಎಂದು ಕಾರ್ಗಿಲ್ ಯುದ್ಧದ ಬಗ್ಗೆ ಮಾತನಾಡಿದರು.

ಕರ್ನಾಟಕದ 16 ಸೈನಿಕರು ಸೇರಿದಂತೆ ಒಟ್ಟು 527 ಸೈನಿಕರು ತಮ್ಮ ಪ್ರಾಣವನ್ನು ಬಲಿಕೊಟ್ಟಿದ್ದಾರೆ. ಇಡೀ ದೇಶ ರಕ್ಷಣೆ ಮಾಡಿದ ಯೋಧರ ಸಾಹಸಗಾಥೆ ಯುವ ಪೀಳಿಗೆಗೆ ಎಂದಿಗೂ ಸ್ಪೂರ್ತಿ. ಪ್ರವಾಹ, ಭೂಕಂಪ, ಸುನಾಮಿಯಂತ ವಿಪತ್ತಿನಲ್ಲಿ ನಾಡಿನ ರಕ್ಷಣೆಗೆ ಧಾವಿಸುವ ಯೋಧರ ಸಾಹಸ ಅನುಕರಣೀಯ. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ಕುಟುಂಬದೊಂದಿಗೆ ನಾವಿದ್ದೇವೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಕೆಚ್ಚೆದೆಯ ಯೋಧರ ಪರಂಪರೆಯನ್ನು ಮುಂದುವರಿಸುವ ಪಣ ತೊಡೋಣ ಎಂದು ಸಿಎಂ ಯಡಿಯೂರಪ್ಪ ಹೇಳಿದರು.

Comments

Leave a Reply

Your email address will not be published. Required fields are marked *