ದೇಶದ ಕೆಟ್ಟ ಕನಸುಗಾರ ಸಿದ್ದರಾಮಯ್ಯ: ಈಶ್ವರಪ್ಪ

ಚಿತ್ರದುರ್ಗ: ಈ ದೇಶ ಹಾಗೂ ರಾಜ್ಯದ ಕೆಟ್ಟ ಕನಸುಗಾರ ಸಿದ್ದರಾಮಯ್ಯ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಜಿಲ್ಲೆಯ ಮಾದಾರಚನ್ನಯ್ಯ ಗುರುಪೀಠದಲ್ಲಿ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದ ಬಳಿಕ ಮಾತನಾಡಿದ ಅವರು, ಈ ಬಿಜೆಪಿ ಸರ್ಕಾರ ಇಂದು ಬೀಳುತ್ತೆ, ನಾಳೆ ಹೋಗುತ್ತೆ, ಇಂದು ಬೆಳಗ್ಗೆ ಬೀಳುತ್ತೆ, ರಾತ್ರಿ ಹೋಗುತ್ತೆ ಅಂತ ಬರೀ ಕೆಟ್ಟ ಕನಸು ಕಾಣುತಿದ್ದರು. ಈ ಸಿದ್ದರಾಮಯ್ಯನವರಿಗೆ ಸಿಎಂ ಸ್ಥಾನ ಕಳೆದುಕೊಂಡಾಗಿಂದ ಕೆಟ್ಟ ಕನಸು ನಿರಂತರವಾಗಿದ್ದು, ಮತ್ತೆ ಸಿಎಂ ಆಗುವ ಕನಸು ಕಾಣುತಿದ್ದಾರೆ. ಆದರೆ ಹಿಂದುಳಿದ, ದಲಿತರಿಗೆ ಮಾಡಿದ ಮೋಸದಿಂದ ಸಿದ್ದರಾಮಯ್ಯ ಸರ್ಕಾರ ಹೋಗಿದೆ. ರಾಜ್ಯದಲ್ಲಿ ಇನ್ನೆಂದೂ ಕಾಂಗ್ರೆಸ್ ಸರ್ಕಾರ ಬರಲ್ಲ ಹೀಗಾಗಿ ಸಿದ್ದರಾಮಯ್ಯ ಸಿಎಂ ಕನಸು ಕಾಣುವುದು ಬೇಡ ಎಂದು ವ್ಯಂಗ್ಯವಾಡಿದರು.

ಹೊರಗಡೆಯಿಂದ ಬಂದವರು ವಲಸಿಗರು ಎಂದು ಡಿಕೆಶಿ ಹೇಳಿದ್ದ ಮಾತಿಗೆ ಕಿಡಿಕಾರಿದ ಸಚಿವರು, ತಾವು ಕಾಂಗ್ರೆಸ್ ಪಕ್ಷದ ಸೊಸೆ ಎಂದು ಹೇಳಿ ಸಿದ್ದರಾಮಯ್ಯ ಒಪ್ಪಿಕೊಂಡರು. ಈ ಹಿಂದೆ ಬಾದಾಮಿಯಲ್ಲಿ ಕಾಂಗ್ರೆಸ್ ಪಕ್ಷದ ಮಗ ಎಂದು ಹೇಳಿ ಗೆದ್ದರು. ಬಳಿಕ ಚಾಮುಂಡೇಶ್ವರಿಯಲ್ಲಿ ಕಾಂಗ್ರೆಸ್ ಮಗ ಎಂದು ಹೇಳಿದರು. ಈಗ ಯಾರಿಗೆ ಮಗ, ಯಾರಿಗೆ ಸೊಸೆ, ಯಾರು ಅಪ್ಪ, ಅಮ್ಮ ಯಾರು ನಿಮಗೆ? ಬಿಜೆಪಿಯವರು ಮಾತ್ರ ನಮ್ಮ ತಾಯಿ ಭಾರತಮಾತೆ ಎಂದು ಹೇಳುತ್ತೇವೆ. ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ತಾಯಿನಾ? ಜೆಡಿಎಸ್ ನಿಮ್ಮ ತಾಯಿನಾ? ಎಬಿಪಿಜೆಡಿ ನಿಮ್ಮ ತಾಯಿನಾ? ಅಥವಾ ಮತ್ತೊಂದು ಪಕ್ಷಕ್ಕೆ ಹೋದರೆ ಅದು ನಿಮ್ಮ ತಾಯಿನಾ ಎಂದು ಸ್ಪಷ್ಟಪಡಿಸಲಿ ಎಂದಿದ್ದಾರೆ.

ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಬಗ್ಗೆ ಸಮರ್ಥಿಸಿಕೊಂಡ ಅವರು, ಸುಖಾಸುಮ್ಮನೆ ಇಂದಿರಾ ಕ್ಯಾಂಟೀನ್ ಹೆಸರು ತೆಗೆಯಲ್ಲ. ಜನ ಸಂತೋಷಪಡುವ ದಿಕ್ಕಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ಅಲ್ಲದೆ ರಾಜೀವ್ ಗಾಂಧಿ ಹೆಸರು ತೆಗೆದು ಧ್ಯಾನಚಂದ್ ಹೆಸರು ಇಟ್ಟಿದ್ದಾರೆ, ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಲಿ ನೋಡೋಣ ಎಂದಿದ್ದ ಡಿಕೆಶಿಗೆ ತಿರುಗೇಟು ನೀಡಿದರು.

ಖಾತೆ ಹಂಚಿಕೆ ಅಸಮಧಾನ ಬಿಜೆಪಿ ಸರಿಪಡಿಸಲಿದೆ. ನೂತನ ಸಂಪುಟದಲ್ಲಿ ಮಂತ್ರಿಗಳಿಗೆ ಖಾತೆ ಹಂಚಿಕೆ ವೇಳೆ ಅಸಮಾಧಾನ ಸಹಜ. ಆದರೆ ಎಲ್ಲರನ್ನೂ ಸಮಾಧಾನ ಮಾಡುವ ಕೆಲಸ ಬಿಜೆಪಿಯಿಂದ ಆಗುತ್ತದೆ. ಖಾತೆ ಹಂಚಿಕೆ ವಿಚಾರದಲ್ಲಿ ಸಚಿವರಾದ ಎಂಟಿಬಿ ಹಾಗೂ ಆನಂದಸಿಂಗ್ ಅಪಸ್ವರ ಎತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ಬಂದ ಅನೇಕರಿಂದ ನೂತನ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅವರು ಬರದಿದ್ದರೆ ಈ ಸರ್ಕಾರ ಕೂಡ ಆಗುತ್ತಿರಲಿಲ್ಲ. ಈ ವೇಳೆ ಅವರು ಬಯಸಿದ ಖಾತೆ ಸಿಗದಿದ್ದಾಗ ಅಸಮಧಾನ ಸ್ವಾಭಾವಿಕ. ಆದರೆ ಎಲ್ಲರನ್ನೂ ಸಮಾಧಾನಪಡಿಸುವ ಕೆಲಸ ಬಿಜೆಪಿ ಮಾಡಲಿದೆ ಎಂದರು.

Comments

Leave a Reply

Your email address will not be published. Required fields are marked *