ದೇಶದ ಎಲ್ಲರಿಗೂ ಲಸಿಕೆ ನೀಡ್ತೇವೆ ಅಂತ ಹೇಳೇ ಇಲ್ಲ – ಕೇಂದ್ರ ಸರ್ಕಾರ

ನವದೆಹಲಿ: ದೇಶದ ಎಲ್ಲ ಪ್ರಜೆಗಳಿಗೆ ಕೊರೊನಾ ಲಸಿಕೆ ನೀಡುವುದಾಗಿ ಎಲ್ಲಿಯೂ ಹೇಳಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಐಸಿಎಂಆರ್‌ ನಿರ್ದೇಶಕ ಬಲರಾಮ್‌ ಭಾರ್ಗವ್‌ ಮತ್ತು ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ದೇಶದಲ್ಲಿ ಎಲ್ಲ ಪ್ರಜೆಗಳಿಗೆ ಲಸಿಕೆ ನೀಡುವ ಬಗ್ಗೆ ಮಾತನಾಡಿಲ್ಲ. ಈ ವಿಚಾರದ ಬಗ್ಗೆ ವಾಸ್ತವ ಮಾಹಿತಿಗಳನ್ನಾಧರಿಸಿ ಚರ್ಚಿಸಬೇಕೇ ಹೊರತು ಒಟ್ಟಾರೆಯಾಗಿ ಮಾತನಾಡಬಾರದು ಎಂದು ಹೇಳಿದರು.

ಇಡೀ ದೇಶಕ್ಕೆ ಲಸಿಕೆ ನೀಡುವ ಅಗತ್ಯವಿಲ್ಲ. ಕೊರೊನಾ ಹರಡುವ ಸರಣಿಯನ್ನು ಮುರಿಯಲು ನಿರ್ದಿಷ್ಟವಾದ ವರ್ಗದ ಜನರಿಗೆ ನೀಡಿದರೆ ಸಾಕಾಗುತ್ತದೆ. ಸಣ್ಣ ಸಂಖ್ಯೆಯ ಜನರಿಗೆ ನೀಡುವ ಮೂಲಕ ಲಸಿಕೆ ಹಂಚುವ ಕಾರ್ಯಕ್ರಮ ಆರಂಭಿಸುತ್ತೇವೆ. ಲಸಿಕೆ ಬಂದ ಮೇಲೂ ಮಾಸ್ಕ್‌ ಧರಿಸುವುದು ಮುಖ್ಯ ಎಂದು ತಿಳಿಸಿದರು.

ವೈರಸ್ ಹರಡುವ ಸರಪಳಿ ಮುರಿಯುವುದು ನಮ್ಮ ಉದ್ದೇಶ. ಸೋಂಕು ಹರಡುವುದನ್ನು ತಡೆಯಲು ನಾವು ಯಶಸ್ವಿಯಾದರೆ ಎಲ್ಲರಿಗೂ ಲಸಿಕೆ ನೀಡುವ ಅಗತ್ಯವಿಲ್ಲ ಎಂದು ಬಲರಾಮ್‌ ಭಾರ್ಗವ್‌ ಹೇಳಿದರು.

ಜಗತ್ತಿನ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪ್ರಮಾಣ ಮತ್ತು ಸಾವಿನ ಪ್ರಮಾಣ ಕಡಿಮೆ ಇದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣ ಕಾಯ್ದುಕೊಳ್ಳುವ ಮೂಲಕ ಸೋಂಕು ಮತ್ತಷ್ಟು ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಅವರು ವಿವರಿಸಿದರು.

ಕೇಂದ್ರ ಸರ್ಕಾರ ಹೇಳಿದ್ದು ಏನು?
ಬಿಹಾರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಬಿಹಾರದಲ್ಲಿ ಬಿಜೆಪಿ ಗೆದ್ದರೆ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ಹೇಳಿದ್ದರು. ಈ ವಿಚಾರ ಬಹಳ ಚರ್ಚೆಗೆ ಗ್ರಾಸವಾಗಿತ್ತು.

Comments

Leave a Reply

Your email address will not be published. Required fields are marked *