ದೇಶದಲ್ಲಿ ಕರ್ನಾಟಕ ಅತ್ಯುತ್ತಮವಾಗಿ ಕೊರೊನಾ ನಿಯಂತ್ರಿಸಿದೆ: ಸುಧಾಕರ್

ಚಿಕ್ಕಮಗಳೂರು: ದೇಶದಲ್ಲಿ ಕರ್ನಾಟಕ ಅತ್ಯುತ್ತಮವಾಗಿ ಕೊರೊನಾ ನಿಯಂತ್ರಣಕ್ಕೆ ತಂದಿದೆ. ಶೇ.97 ರಿಂದ 98ರಷ್ಟು ಜನ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.

ಸುಮಾರು 1,063 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿ ಹಾಗೂ ಶಂಕುಸ್ಥಾಪನೆಗೆ ಆಗಮಿಸಿದ್ದ ಅವರು, ರೂಪಾಂತರಗೊಂಡಿರುವ ವೈರಾಣು ಇಂಗ್ಲೆಂಡ್‍ನಲ್ಲಿ ಪತ್ತೆಯಾಗಿದ್ದು, ಮತ್ತೆ ಬರುತ್ತಿದೆ ಎಂಬ ಸಂದೇಹ ನಮಗೆಲ್ಲ ಇದೆ. ಹೀಗಾಗಿ ನಾವು ಮುನ್ನೆಚ್ಚರಿಕೆ ವಹಿಸಬೇಕು. ಆರೋಗ್ಯ ಮತ್ತು ಶಿಕ್ಷಣ ಸಮಾಜದ ಎರಡು ಕಣ್ಣುಗಳಿದ್ದಂತೆ. ಮುಖ್ಯಮಂತ್ರಿಗಳು ಆರ್ಥಿಕ ದುಸ್ಥಿತಿ ಮಧ್ಯೆಯೂ ಈ ವರ್ಷ ನಾಲ್ಕು ಜಿಲ್ಲೆಗಳಿಗೆ ನಾಲ್ಕು ಮೆಡಿಕಲ್ ಕಾಲೇಜು ನೀಡುವ ಮೂಲಕ ಆರೋಗ್ಯ ಕ್ಷೇತ್ರಕ್ಕೆ ಅವರು ನೀಡಿರುವ ಆದ್ಯತೆ, ಬದ್ಧತೆ ಹಾಗೂ ಜವಾಬ್ದಾರಿಯನ್ನ ಪ್ರದರ್ಶಿಸಿದ್ದಾರೆ.

ಚಿಕ್ಕಮಗಳೂರಿನ ವೈದ್ಯಕೀಯ ಕಾಲೇಜಿಗೆ 428 ಕೋಟಿ ವೆಚ್ಚವಾದರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ 184 ಕೋಟಿ ರೂಪಾಯಿಗಳಾಗಿವೆ. ಸುಮಾರು 600 ಕೋಟಿ ರೂಪಾಯಿಗಳಲ್ಲಿ 195 ಕೋಟಿ ಕೇಂದ್ರ ಸರ್ಕಾರದಿಂದ ಬಂದರೆ, 405 ಕೋಟಿ ರಾಜ್ಯ ಸರ್ಕಾರದಿಂದ ಬರುತ್ತದೆ. ಈಗಾಗಲೇ ಮೆಡಿಕಲ್ ಕಾಲೇಜಿಗೆ ಅನುಮೋದನೆ ನೀಡಿ ಎರಡು ತಿಂಗಳುಗಳೇ ಕಳೆದಿವೆ. 24-30 ತಿಂಗಳಲ್ಲಿ ಮುಗಿಸಬೇಕೆಂದು ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇವೆ. ಮುಂದಿನ ಎರಡು ವರ್ಷದಲ್ಲಿ ಕಾಲೇಜು ಉದ್ಘಾಟನೆಯಾಗುತ್ತೆ ಎಂದರು.

ಇದೇ ವೇಳೆ ಮಾತನಾಡಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕಳೆದ ಎರಡು ವರ್ಷದಲ್ಲಿ 2 ಬಾರಿ ಅತಿ ಹೆಚ್ಚು ಮಳೆಯಾಗಿ ರಸ್ತೆ, ಸೇತುವೆ ರೈತರ ಬೆಳೆ, ಮನೆ-ಮಠ ನಾಶವಾಗಿರುವ ಒಟ್ಟು ಹಾನಿ ಕಳೆದ ವರ್ಷ 35 ಸಾವಿರ ಕೋಟಿ. ಈ ವರ್ಷ 25 ಸಾವಿರ ಕೋಟಿ, ಒಟ್ಟು 60 ಸಾವಿರ ಕೋಟಿಯಷ್ಟು ಹಾನಿಯಾಗಿದೆ. ಇದರ ಮಧ್ಯೆ ಕಳೆದ 11 ತಿಂಗಳಿಂದ ಕೊರೊನಾ ರೋಗದ ಸಂಕಷ್ಟದ ಮಧ್ಯೆಯೂ ಸರ್ಕಾರ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನ ಮಾಡಿದೆ ಎಂದರು.

ಶಾಸಕ ಸಿ.ಟಿ.ರವಿಯವರಿಗೆ ಸಾವಿರ ಕೋಟಿಯೂ ಸಾಕಾಗಿಲ್ಲ ಅನ್ಸುತ್ತೆ. ಅವರ ಲಿಸ್ಟ್ ಇನ್ನೂ ದೊಡ್ಡದಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸಿ.ಟಿ.ರವಿಯ ಅಭಿವೃದ್ಧಿ ಕಾರ್ಯವನ್ನ ಹಾಡಿ ಹೋಗಳಿದರು. ಕೊರೊನಾ ಕಾರಣದಿಂದ ಸರ್ಕಾರಕ್ಕೆ ಬರಬೇಕಿದ್ದ ಆದಾಯ ಕೂಡ ಬರುತ್ತಿಲ್ಲ. ಇಂತಹ ಸಂಕಷ್ಟದ ಮಧ್ಯೆಯೂ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ಅಭಿವೃದ್ಧಿ ಹಾಗೂ ಅಭಿವೃದ್ಧಿ ಯೋಜನೆಗಳ ಕೆಲಸಕ್ಕೆ ಕಷ್ಟಪಟ್ಟು ಹಣ ನೀಡುತ್ತಿರೋದು ಆಶ್ಚರ್ಯ ಎಂದರು.

Comments

Leave a Reply

Your email address will not be published. Required fields are marked *