ದೇವೇಗೌಡ್ರನ್ನು ಸಂಸತ್ ಪ್ರವೇಶ ಮಾಡಿಸೇ ಮಾಡಿಸ್ತೇವೆ: ಶಿವಲಿಂಗೇಗೌಡ

ಹಾಸನ: ಹೇಗಾದರೂ ಮಾಡಿ ದೇವೇಗೌಡರನ್ನು ಒಪ್ಪಿಸಿ ರಾಜ್ಯಸಭೆಗೆ ಕಳುಹಿಸಿಯೇ ಕಳುಹಿಸುತ್ತೇವೆ. ಅದಕ್ಕಾಗಿ ಯಾವ ಪಕ್ಷದವರ ಬಳಿಯಾದರು ಮತ ಕೇಳುತ್ತೇವೆ ಎಂದು ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸಭೆ ಚುನಾವಣೆಯಲ್ಲಿ ದೇವೇಗೌಡರಂಥ ಅನುಭವಿ ರಾಜಕಾರಣಿ ಸಲಹೆ ಸೂಚನೆಗಳು ಭಾರತಕ್ಕೆ ಅವಶ್ಯಕತೆ ಇದೆ. ಕೆಟ್ಟ ಅನಿವಾರ್ಯ ರಾಜಕಾರಣದಿಂದ ಅವರು ಈ ಬಾರಿ ಸಂಸತ್ ಪ್ರವೇಶ ಮಾಡಲು ಸಾಧ್ಯವಾಗಲಿಲ್ಲ. ಅದನ್ನು ಹಿಂಬಾಗಿಲಿನ ರಾಜಕಾರಣ ಎಂದು ಭಾವಿಸಬಾರದು. ಬಹಳಷ್ಟು ಜನ ಪ್ರಜ್ಞಾವಂತ ರಾಜಕಾರಣಿಗಳ ಪ್ರಕಾರ ದೇವೇಗೌಡರು ಇಂದು ಸಂಸತ್ತನ್ನು ಪ್ರವೇಶ ಮಾಡುವುದು ಒಳ್ಳೆಯದು. ಏನಾದರೂ ಮಾಡಿ ನಾವು ದೇವೇಗೌಡರನ್ನು ಒಪ್ಪಿಸಿಯೇ ಒಪ್ಪಿಸುತ್ತೇವೆ ಎಂದರು.

ದೇವೇಗೌಡರನ್ನು ಸಂಸತ್ ಪ್ರವೇಶ ಮಾಡಿಸುತ್ತೇವೆ. ಈಗ ಯಾವುದೇ ಚುನಾವಣೆ ಇಲ್ಲ. ಯಾವುದಾದರೂ ಬೈ ಎಲೆಕ್ಷನ್ ಇದ್ದಿದ್ರೆ ಗೆಲ್ಲಿಸಬಹುದಿತ್ತು. ರಾಜ್ಯಸಭೆ ಹಿರಿಯರ ಸಂಸತ್ತು. ಇವರು ಅಲ್ಲಿ ಕುಳಿತು ಕೆಲಸ ಮಾಡಿದ್ರೆ ರೈತರಿಗೆ ಒಳಿತಾಗಲಿದೆ. ಅವರ ಅವಶ್ಯಕತೆ ಇಂದು ನಮಗೆ ಇದೆ. ರಾಜ್ಯದ ಜನತೆಗಾಗಿಯಾದರೂ ದೇವೇಗೌಡರು ರಾಜ್ಯಸಭೆ ಪ್ರವೇಶಿಸಬೇಕು. ಒಂದಷ್ಟು ಮತ ನಮಗೆ ಸಾಲ್ಟೇಜ್ ಇದೆ. ದೇವೇಗೌಡರಂಥ ಹಿರಿಯರನ್ನು ಪಕ್ಷಬೇಧ ಮರೆತು ಕಳುಹಿಸುತ್ತಾರೆ ಎಂಬುದು ನನ್ನ ಭಾವನೆ ಎಂದು ತಿಳಿಸಿದರು.

ನಾವು ಹೋಗಿ ಯಾವ ಪಕ್ಷದವರನ್ನಾದರೂ ಮತ ಕೇಳಿಕೊಳ್ಳುತ್ತೇವೆ. ಕಾಂಗ್ರೆಸ್ ಪಕ್ಷ ಅವರ ಬಳಿ ಹೆಚ್ಚಿರುವ ಮತ ನಮಗೆ ಕೊಟ್ಟರೆ ನಾವು ಅವರಿಗೆ ಯಾವಾಗಲಾದರೂ ಸಹಾಯ ಮಾಡುತ್ತೇವೆ. ಹಿಂದೆ ದೇವೇಗೌಡರು ಎಸ್‍ಎಂಕೆ ಅವರಿಗೆ ಈ ರೀತಿ ಸಹಾಯ ಮಾಡಿದ್ರು ಎಂದು ಶಾಸಕ ಶಿವಲಿಂಗೇಗೌಡ ನೆನಪಿಸಿಕೊಂಡರು.

Comments

Leave a Reply

Your email address will not be published. Required fields are marked *