ದೇವಸ್ಥಾನದ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದ ಮಾಜಿ ಶಾಸಕ ಮೊಯಿದ್ದೀನ್ ಬಾವಾಗೆ ಬೆದರಿಕೆ ಕರೆ

– ಇದು ನೆಹರು ದೇಶವಲ್ಲ, ಮೋದಿ ದೇಶ
– ಬೆದರಿಕೆ ಕರೆ ವಿರುದ್ಧ ದೂರು ದಾಖಲು

ಮಂಗಳೂರು: ದೇವಸ್ಥಾನದ ನವರಾತ್ರಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದ ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊಯಿದ್ದೀನ್ ಬಾವಾಗೆ ಮುಂಬೈನಿಂದ ಬೆದರಿಕೆ ಕರೆ ಬಂದಿದೆ.

ಮಂಗಳೂರು ಹೊರವಲಯದ ಬಜಪೆ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನವರಾತ್ರಿಯ ಪ್ರಯುಕ್ತ ಕೊಪ್ಪರಿಗೆ ಇಡುವ ಕಾರ್ಯಕ್ರಮವಿತ್ತು. ಇದಕ್ಕೆ ಕ್ಷೇತ್ರದ ಆಹ್ವಾನದಂತೆ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಭೇಟಿ ನೀಡಿದ್ದರು. ಅದೇ ವೇಳೆ ಕೊಪ್ಪರಿಗೆ ಇಡುವ ಧಾರ್ಮಿಕ ವಿಧಿ ವಿಧಾನ ನಡೆಯುತ್ತಿತ್ತು. ಹೀಗಾಗಿ ಕ್ಷೇತ್ರಾಡಳಿತ ಮಂಡಳಿಯವರು ಮಾಜಿ ಶಾಸಕ ಮೊಯಿದ್ದೀನ್ ಬಾವಾರಿಂದಲೂ ಕೊಪ್ಪರಿಗೆಗೆ (ಅನ್ನದಾನಕ್ಕೆ ಅಕ್ಕಿ ಸಂಗ್ರಹಿಸುವ ದೊಡ್ಡ ಪಾತ್ರೆ) ಅಕ್ಕಿ ಹಾಕುವಂತೆ ಹೇಳಿದ್ದು, ಬಾವಾ ಅವರು ಕೊಪ್ಪರಿಗೆಗೆ ಅಕ್ಕಿ ಹಾಕಿದ್ದಾರೆ.

ಇದರ ವೀಡಿಯೋ ವೈರಲ್ ಆಗಿ ಪರ ವಿರೋಧ ಚರ್ಚೆ ನಡೆದಿತ್ತು. ಇದೇ ವೇಳೆ ಮುಂಬೈನಿಂದ ಅನಿಲ್ ಎಂದು ಹೇಳಿಕೊಂಡ ವ್ಯಕ್ತಿ ಮೊಯಿದ್ದೀನ್ ಬಾವಾ ಅವರ ಮೊಬೈಲ್‍ಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಹಿಂದೂ ದೇವಸ್ಥಾನದಲ್ಲಿ ನೀವು ಕೊಪ್ಪರಿಗೆಗೆ ಅಕ್ಕಿ ಹಾಕಿದ್ದು ಯಾಕೆ? ನೀವು ದನದ ಮಾಂಸ ತಿನ್ನೋರು ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗೋದು ಸರಿಯಲ್ಲ. ಇದು ನೆಹರು ದೇಶವಲ್ಲ, ಮೋದಿಯ ದೇಶ, ಇನ್ನು ಮುಂದೆ ಹೀಗೆಲ್ಲಾ ಹೋದ್ರೆ ಹುಷಾರ್ ಎಂದು ತುಳುವಿನಲ್ಲಿ ಮಾತಾಡಿ ಬೆದರಿಕೆ ಹಾಕಲಾಗಿದೆ. ಈ ಬೆದರಿಕೆ ಕರೆಯ ಬಗ್ಗೆ ಮೊಯಿದ್ದೀನ್ ಬಾವಾ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು ಎಫ್‍ಐಆರ್ ದಾಖಲಾಗಿದೆ.

ಸುಂಕದಕಟ್ಟೆ ದೇವಸ್ಥಾನದ ನವರಾತ್ರಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದ ಬಗ್ಗೆ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಹೇಳಿಕೆ ನೀಡಿದ್ದು, ದೇವಸ್ಥಾನದ ನವರಾತ್ರಿ ಉತ್ಸವಕ್ಕೆ ಅಲ್ಲಿನ ಸ್ವಾಮೀಜಿಯವರ ಮಗ ನನ್ನನ್ನು ಆಹ್ವಾನಿದ್ದರು. ನಾನು ಅಲ್ಲಿನ ಮಾಜಿ ಶಾಸಕನ ನೆಲೆಯಲ್ಲಿ ಅಲ್ಲಿಗೆ ಹೋಗಿದ್ದೇನೆ. ನಾನು ಅಲ್ಲಿಗೆ ಹೋದಾಗ ಕೊಪ್ಪರಿಗೆಗೆ ಅಕ್ಕಿಯನ್ನ ಹಾಕುವ ಧಾರ್ಮಿಕ ಕಾರ್ಯ ನಡೆಯುತ್ತಿತ್ತು. ದೇವರ ಅನುಗ್ರಹದಂತೆ ನನಗೆ ಆ ಅವಕಾಶ ಸಿಕ್ಕಿತು ಅಂದುಕೊಳ್ತೇನೆ. ಆಗಷ್ಟೇ ಹಾಲಿ ಶಾಸಕರು ಬಂದು, ಅರ್ಜೆಂಟ್ ಇದೆ ಅಂತ ಹೋದರು ಅನ್ನೋದು ಗೊತ್ತಾಯ್ತು. ಅಲ್ಲಿದ್ದವರು ನನಗೆ ಅಕ್ಕಿ ಹಾಕಿ ಅಂತ ಹೇಳಿದಾಗ ಹಾಕಿದೆ.

ನಾನು ಜಾತಿವಾದಿಯಲ್ಲ, ಜಾತ್ಯಾತೀತ ನೆಲೆಯಲ್ಲಿ ಮಾಡಿದೆ. ಇದರಲ್ಲಿ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ನಾನು ಅಲ್ಲಿ ಸೋತಿದ್ದರೂ ಜನರ ಪ್ರೀತಿ ಇಂದಿಗೂ ನನಗಿದೆ. ಚುನಾವಣೆ ವೇಳೆ ನಡೆದ ಒಂದು ಕೊಲೆಯನ್ನು ನನ್ನ ತಲೆಗೆ ಕಟ್ಟಿ ಸೋಲಿಸಿದ್ದರು. ಈ ಷಡ್ಯಂತ್ರದಿಂದ ಭರತ್ ಶೆಟ್ಟಿ ಅಲ್ಲಿ ಶಾಸಕನಾಗಿ ಆಯ್ಕೆಯಾಗಿದ್ದಾರೆ ಎಂದು ಮಾಜಿ ಶಾಸಕ ಮೊಯಿದ್ದೀನ್ ಬಾವಾ ಪ್ರತಿಕ್ರಿಯಿಸಿದ್ದಾರೆ.

Comments

Leave a Reply

Your email address will not be published. Required fields are marked *