ದೆಹಲಿ ಲಾಕ್‍ಡೌನ್ – ತವರಿನತ್ತ ಮುಖಮಾಡಿದ ವಲಸೆ ಕಾರ್ಮಿಕರು

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ 6 ದಿನಗಳ ಲಾಕ್‍ಡೌನ್ ಜಾರಿಗೆ ಆದೇಶ ಬರುತ್ತಿದ್ದಂತೆ ವಲಸೆ ಕಾರ್ಮಿಕರು ತಮ್ಮ ಊರುಗಳತ್ತ ಮುಖಮಾಡಿದ್ದಾರೆ.

ಕೊವೀಡ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಒಂದು ವಾರ ದೆಹಲಿ ಸಂಪೂರ್ಣವಾಗಿ ಲಾಕ್‍ಡೌನ್ ಆಗಿದೆ. ಈ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ಭಯದಿಂದ ತಮ್ಮ ಊರುಗಳತ್ತ ಪ್ರಯಾಣ ಮಾಡಿದ್ದಾರೆ. ನಿನ್ನೆ ರಾತ್ರಿ 10 ಗಂಟೆಗೆ ಪ್ರಾರಂಭವಾದ ಲಾಕ್‍ಡೌನ್ ಏಪ್ರಿಲ್ 26ರ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಇರಲಿದೆ. ಅಗತ್ಯ ಸೇವೆಗಳಿಗೆ ಮಾತ್ರ ಅನುವು ಮಾಡಿಕೊಡಲಾಗಿದೆ. ಆದರೆ ಜನರು ಭಯಗೊಂಡು ತಮ್ಮ ಊರುಗಳಿಗೆ ಪ್ರಯಾಣ ಮಾಡಿದ್ದಾರೆ.

ಕೇವಲ 6 ದಿನಗಳವರೆಗೆ ಮಾತ್ರ ಈ ಲಾಕ್‍ಡೌನ್ ಇರಲಿದೆ. ಹೀಗಾಗಿ ಯಾರು ದೆಹಲಿ ಬಿಟ್ಟು ಹೊರಗೆ ಹೋಗಬೇಡಿ ಎಂದು ದೆಹಲಿಯ ಸಿಎಂ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದಾರೆ. ಆದರೆ ಸಾವಿರಾರು ಕೂಲಿ ಕಾರ್ಮಿಕರು ಗಂಟುಮೂಟೆ ಕಟ್ಟಿಕೊಂಡು ತಮ್ಮ ಊರುಗಳತ್ತ ಪ್ರಯಾಣ ಬೆಳಸುತ್ತಿದ್ದಾರೆ. ಮಧ್ಯರಾತ್ರಿಯಲ್ಲಿ ಕೂಲಿ ಕಾರ್ಮಿಕರು, ಆಟೋ, ಟೆಂಪೋ, ಬಸ್ ಹಾಗೂ ಲಾರಿ ಹತ್ತು ಊರುಗಳಿಗೆ ಹೋಗಿ ಸೇರುತ್ತಿದ್ದಾರೆ.

ಲಾಕ್‍ಡೌನ್ ವಿಸ್ತರಣೆಯಾಗುವ ಸಾಧ್ಯತೆ ಇರುವುದರಿಂದ ನಾವು ಮನೆಗೆ ಹೋಗಲು ಬಯಸಿದ್ದೇವೆ. ಲಾಕ್‍ಡೌನ್ ಖಂಡಿತವಾಗಿಯೂ ನಮ್ಮ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ನಾವು ನಮ್ಮ ಮನೆಯಲ್ಲಿಯೇ ಇರುವುದು ಉತ್ತಮವಾಗಿದೆ ವಲಸೆ ಹೋಗುತ್ತಿರುವ ಕಾರ್ಮಿಕರೊಬ್ಬರು ಹೇಳಿದ್ದಾರೆ.

ಖಾಸಗಿ ಬಸ್ಸುಗಳಲ್ಲಿ ಟಿಕೆಟ್‍ಗೆ ಹೆಚ್ಚಿನ ಶುಲ್ಕ ವಿಧಿಸುತ್ತಿದ್ದಾರೆ. ನಾವು ಪ್ರತಿನಿತ್ಯ ಕೊಟ್ಟು ಓಡಾಡುವುದಕ್ಕಿಂತ ಅಧಿಕ ಹಣವನ್ನು ತೆಗೆದುಕೊಳ್ಳುತ್ತಿದ್ದಾರೆ. ಮನೆಗೆ ತಲುಪಲು ನಮಗೆ 200 ರೂ. ಬೇಕು, ಆದರೆ ಅವರು ಈಗ 3,000-4,000 ರೂ. ವಿಧಿಸುತ್ತಿದ್ದಾರೆ, ನಾವು ಮನೆಗೆ ಹೇಗೆ ಹೋಗುತ್ತೇವೆ. ಲಾಕ್‍ಡೌನ್ ಘೋಷಿಸುವ ಮೊದಲು ಸಿಎಂ ನಮಗೆ ಸ್ವಲ್ಪ ಸಮಯ ನೀಡಬೇಕಾಗಿತ್ತು ಎಂದು ವಲಸೆ ಕಾರ್ಮಿಕರೊಬ್ಬರು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *