ದೆಹಲಿಯಲ್ಲಿ ದೇಶದ ಮೊದಲ ಪ್ಲಾಸ್ಮಾ ಬ್ಯಾಂಕ್- ಸಾವಿನ ಪ್ರಮಾಣ ನಿಯಂತ್ರಿಸಲು ಸರ್ಕಾರದಿಂದ ಮಹತ್ವದ ಕ್ರಮ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಂಕಿನ ಪ್ರಮಾಣ ಗಣನೀಯ ಏರಿಕೆ ಹಿನ್ನೆಲೆಯಲ್ಲಿ ಸಾವಿನ ಪ್ರಮಾಣ ನಿಯಂತ್ರಿಸಲು ಪ್ಲಾಸ್ಮಾ ಬ್ಯಾಂಕ್ ಪ್ರಾರಂಭಿಸುವುದಾಗಿ ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುವ, ಮುಂದಿನ ಎರಡು ದಿನಗಳಲ್ಲಿ ದೇಶದ ಮೊದಲ ಪ್ಲಾಸ್ಮಾ ಬ್ಯಾಂಕ್ ದೆಹಲಿಯಲ್ಲಿ ಕಾರ್ಯರಂಭ ಮಾಡಲಿದೆ. ದಕ್ಷಿಣ ದೆಹಲಿಯ ವಸಂತ್ ಕುಂಜ್ ನ ಇನ್ಸ್ ಸ್ಟಿಟ್ಯೂಟ್ ಆಫ್ ಲಿವರ್ ಆ್ಯಂಡ್ ಬಿಲಿಯರಿ ಸೈನ್ಸಸ್ ನಲ್ಲಿ ಪ್ಲಾಸ್ಮಾ ಬ್ಯಾಂಕ್ ಸ್ಥಾಪಿಸಲಾಗುತ್ತಿದ್ದು, ಕೊರೊನಾದಿಂದ ವಾಸಿಯಾಗಿರುವ ಜನರು ಪ್ಲಾಸ್ಮಾ ದಾನ ಮಾಡುವಂತೆ ಮನವಿ ಮಾಡಿದ್ದಾರೆ.

ದೆಹಲಿಯಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಸೇರಿ ಈವರೆಗೂ 29 ರೋಗಿಗಳ ಮೇಲೆ ಪ್ಲಾಸ್ಮಾ ಥೆರಪಿ ಪ್ರಯೋಗ ಮಾಡಿದ್ದು ಎಲ್ಲ ಪ್ರಕರಣಗಳ ಫಲಿತಾಂಶ ಉತ್ತಮವಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಪ್ಲಾಸ್ಮಾ ಥೆರಪಿಗೆ ಹೆಚ್ಚು ಮನ್ನಣೆ ನೀಡಲಾಗುತ್ತಿದೆ ಮತ್ತು ಜೀವ ಉಳಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಕೇಜ್ರಿವಾಲ್ ಹೇಳಿದರು.

ಜೀವ ಉಳಿಸುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ ಪ್ಲಾಸ್ಮಾ ದಾನ ಮಾಡುವ ಮೂಲಕ ಜೀವ ಉಳಿಸಬೇಕು. ಇನ್ನೆರಡು ದಿನದಲ್ಲಿ ಹೆಲ್ಪ್‍ಲೈನ್ ನಂಬರ್ ನೀಡಲಿದ್ದು ಆಸಕ್ತಿ ಇದ್ದವರು ನೋಂದಣಿ ಮಾಡಿಕೊಂಡು ಪ್ಲಾಸ್ಮಾ ದಾನಾ ಮಾಡಬಹುದಾಗಿದೆ. ಪ್ಲಾಸ್ಮಾ ಬ್ಯಾಂಕ್ ಕೇಂದ್ರಕ್ಕೆ ಬಂದರೆ ಕೊರೊನಾ ಬರುತ್ತೆ ಎನ್ನುವ ಆತಂಕ ಬೇಡ. ಸರ್ಕಾರ ಸೂಕ್ತ ವ್ಯವಸ್ಥೆ ಮಾಡಲಿದೆ. ಅಲ್ಲದೇ ಪ್ಲಾಸ್ಮಾ ದಾನ ಮಾಡುವ ವ್ಯಕ್ತಿಯು ಆಸ್ಪತ್ರೆಗೆ ಬರುವ ಖರ್ಚು-ವೆಚ್ಚಗಳನ್ನು ಸರ್ಕಾರ ಪಾವತಿಸಲಿದೆ ಎಂದರು.

ದೆಹಲಿಯಲ್ಲಿ ಕಳೆದ 24 ಗಂಟೆಯಲ್ಲಿ 2889 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು 83077 ಮಂದಿ ಕೊರೊನಾಗೆ ತುತ್ತಾಗಿದ್ದಾರೆ. ಈವರೆಗೂ 2600 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

Comments

Leave a Reply

Your email address will not be published. Required fields are marked *