ದೆಹಲಿಗೂ ತೆರಳಬಲ್ಲೆ, ಆ ಉತ್ಸಾಹ ನನ್ನಲ್ಲಿದೆ- ಕಂಗನಾಗೆ 73ರ ರೈತ ಮಹಿಳೆ ತಿರುಗೇಟು

ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ರೈತರ ಪ್ರತಿಭಟನೆ ಮುಂದುವರಿದ್ದಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೇ ನಟಿ ಕಂಗನಾ ರಣಾವತ್ ರೈತರ ಪ್ರತಿಭಟನೆ ಕುರಿತು ಮಾಡಿದ ಟ್ವೀಟ್ ಕುರಿತು ಆಕ್ರೋಶ ವ್ಯಕ್ತವಾಗಿದ್ದು, ಇದಕ್ಕೆ ಇದೀಗ ಸ್ವತಃ ವೃದ್ಧ ರೈತ ಮಹಿಳೆ ಪ್ರತಿಕ್ರಿಯೆ ನೀಡಿದ್ದಾರೆ.

ಬಾಲಿವುಡ್ ನಟಿ ಕಂಗನಾ ರಣಾವತ್ ಸುಳ್ಳು ಸುದ್ದಿಯ ಟ್ವೀಟ್ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ವೃದ್ಧ ರೈತ ಮಹಿಳೆ ಮೊಹಿಂದರ್ ಕೌರ್, ನನ್ನ ಬಗ್ಗೆ ಬರೆದಿರುವ ನಟಿಗೆ ನಾನು ಹೇಳಲು ಬಯಸುತ್ತೇನೆ. ಅವರು ಎಂದೂ ನನ್ನ ಮನೆಗೆ ಭೇಟಿ ನೀಡಿಲ್ಲ, ನಾನು ಏನು ಮಾಡುತ್ತಿದ್ದೇನೆ ಎಂಬುದನ್ನು ನೋಡಿಲ್ಲ. ಆದರೆ 100ರೂ.ಗೆ ನಾನು ಸಿಗುತ್ತೇನೆ ಎಂದು ಹೇಳಿದ್ದಾರೆ. ನನಗೆ ಮೂವರು ಹೆಣ್ಣು ಮಕ್ಕಳು, ಎಲ್ಲರದ್ದೂ ವಿವಾಹವಾಗಿದೆ. ಮಗ ಪತ್ನಿ ಹಾಗೂ ಮಕ್ಕಳೊಂದಿಗೆ ನನ್ನ ಜೊತೆ ಇದ್ದಾನೆ. ಈಗಲೂ ಕುಡಗೋಲಿನಿಂದ ಒಕ್ಕಣಿಗೆ ಮಾಡುತ್ತೇನೆ, ಹತ್ತಿ ಬಿಡಿಸುತ್ತೇನೆ. ಮನೆಗೆ ಬೇಕಾಗುವ ತರಕಾರಿಗಳನ್ನು ನಾವೇ ಬೆಳೆಯುತ್ತೇವೆ ಎಂದಿದ್ದಾರೆ.

ಇತ್ತೀಚೆಗೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಮಾಡುವುದು ಕಷ್ಟವಾಗಿದೆ. ಹೀಗಾಗಿ ನಾನು ಪ್ರತಿಭಟನೆಗೆ ತೆರಳಿ ರೈತರಿಗೆ ಬೆಂಬಲ ನೀಡುತ್ತಿದ್ದೇನೆ. ನಾನು ರೈತ ಮಹಿಳೆ, ಪ್ರತಿಭಟನೆ ಮಾಡಲು ಪೆಟ್ರೋಲ್ ಬಂಕ್‍ಗೆ ತೆರಳುತ್ತಿದ್ದೇನೆ. ಅಲ್ಲದೆ ನಾನು ಈಗಲೂ ದೆಹಲಿಗೆ ಹೋಗಬಲ್ಲೆ, ಆ ಉತ್ಸಾಹ ನನ್ನಲ್ಲಿದೆ. ನಾನು ರೈತರ ಭಾಗವಾಗಿದ್ದೇನೆ ಎಂದು ಹೇಳಿದ್ದಾರೆ.

ಮೊಹಿಂದರ್ ಕೌರ್ ಅವರು, ಬಟಿಂಡಾದ ಬಹದ್ದೂರ್‍ಘರ್ ಜಂಡಿಯನ್ ಗ್ರಾಮದ ನಿವಾಸಿಯಾಗಿದ್ದು, ಸುಮಾರು 13 ಎಕರೆ ಕೃಷಿ ಭೂಮಿ ಹೊಂದಿದ್ದಾರೆ. ಪತಿಗೆ ಅಸ್ತಮಾ ಆಗಿದ್ದರಿಂದ ಮೊಹಿಮದರ್ ಕೌರ್ ಅವರೇ ಕೃಷಿಯಲ್ಲಿ ತೊಡಗಿದ್ದಾರೆ. ಶಹೀನ್ ಭಾಗ್‍ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕೌರ್ ಅವರ ಫೋಟೋಗಳನ್ನು ಹಾಕಿ ಕಂಗನಾ ಟ್ವೀಟ್ ಮಾಡಿದ್ದರು. ಶಹೀನ್ ಭಾಗ್ ಪ್ರತಿಭಟನೆಯಲ್ಲಿ ತೊಡಗಿರುವ ದಾದಿ 100 ರೂ.ಕೊಟ್ಟರೆ ಎಲ್ಲ ಪ್ರತಿಭಟನೆಗಳಿಗೆ ಲಭ್ಯವಿರುತ್ತಾರೆ ಎಂದು ಬರೆದುಕೊಂಡಿದ್ದರು. ಈ ಕುರಿತು ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಟ್ವೀಟ್ ಡಿಲೀಟ್ ಮಾಡಿದ್ದಾರೆ.

ಭಾರತೀಯ ಕಿಸಾನ್ ಸಂಘಟನೆ(ಉಗ್ರಾಹನ್)ಯ ಬ್ಲಾಕ್ ಅಧ್ಯಕ್ಷ ಧರ್ಮಪಾಲ್ ಅವರು ಈ ಕುರಿತು ಮಾತನಾಡಿ, ಅಜ್ಜಿ ಪ್ರತಿಭಟನೆ ನಡೆಸಲು ದಬ್ವಾಲಿ ಗಡಿ ಪ್ರವೇಶಿಸುತ್ತಿದ್ದಂತೆ ಮನೆಗೆ ಹೋಗುವಂತೆ ಸೂಚಿಸಿದೆವು. ವಯಸ್ಸಾಗಿದ್ದರಿಂದ ಪ್ರತಿಭಟನೆಗೆ ಬರುವುದು ಬೇಡ ಎಂದು ತಿಳಿ ಹೇಳಿದೆವು. ಆದರೂ ಅವರು ಕೇಳಲಿಲ್ಲ, ನಿಮ್ಮೊಂದಿಗೇ ಬರುತ್ತೇನೆ ಎಂದು ಹಠ ಹಿಡಿದರು ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *