ದೂರು ಕೊಟ್ಟು ಸಿಡಿ ಯುವತಿ ಪೋಷಕರು ನಾಪತ್ತೆ..!

ಬೆಳಗಾವಿ: ಮಾಜಿ ಸಚಿವರ ರಾಸಲೀಲೆ ಸಿಡಿ ಕೇಸ್ ದಿನದಿಂದ ದಿನಕ್ಕೆ ಸ್ಫೋಟಕ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ನಿನ್ನೆ ತಾನೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಸಿಡಿ ಯುವತಿ ಪೋಷಕರು ನಾಪತ್ತೆಯಾಗಿದ್ದಾರೆ.

ಹೌದು. ಮಂಗಳವಾರ ರಾತ್ರಿ ದೂರು ಕೊಟ್ಟ ಬಳಿಕ ಪೋಷಕರು ನಾಪತ್ತೆಯಾಗಿದ್ದಾರೆ. ಇದಕ್ಕೂ ಮೊದಲು 2 ದಿನಗಳ ಹಿಂದೆಯೇ ಮನೆ ಮಾಲೀಕನಿಗೆ ಬಾಡಿಗೆ ನೀಡಿರುವ ಯುವತಿ ಪೋಷಕರು ಮನೆ ಖಾಲಿ ಮಾಡಿದ್ದಾರೆ.

ನಿನ್ನೆ ಸಿಡಿಯಲ್ಲಿದ್ದ ಮಗಳು ಕಿಡ್ನಾಪ್ ಆಗಿದ್ದಾಳೆ ಎಂದು ಯುವತಿಯ ತಂದೆ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಯುವತಿಯ ತಂದೆ, ತಾಯಿ ಮತ್ತು ಇಬ್ಬರು ಸಹೋದರರು, ಓರ್ವ ವಕೀಲರೊಂದಿಗೆ ಆಗಮಿಸಿ ನಿನ್ನೆ ದೂರು ನೀಡಿದ್ದಾರೆ. ಆದರೆ ದೂರಿನ ಪ್ರತಿಯಲ್ಲಿ ನೀಡಿದ ವಿಳಾಸದಲ್ಲಿದ್ದ ಮನೆಯಿಂದ ಎರಡು ದಿನಗಳ ಹಿಂದೆಯೇ ಯುವತಿ ತಂದೆ ತೆರಳಿದ್ದಾರೆ.

ಯುವತಿ ಕುಟುಂಬ ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯಲ್ಲಿ ವಾಸವಿತ್ತು. ಆದರೆ ನಿನ್ನೆ ದೂರು ನೀಡಿ ಕುಟುಂಬ ಅಜ್ಞಾತವಾಗಿದೆ. ಇತ್ತ ಪೋಷಕರ ದೂರಿನಂತೆ ಯುವತಿ ಕಿಡ್ನ್ಯಾಪ್ ಕೇಸ್ ತನಿಖೆ ನಡೆಸಲು ವಿಶೇಷ ತಂಡ ರಚನೆ ಮಾಡಲಾಗಿದೆ. ಎಪಿಎಂಸಿ ಠಾಣೆ ಸಿಪಿಐ ಜಾವೇದ್ ಮುಷಾಪುರಿ ನೇತೃತ್ವದಲ್ಲಿ ವಿಶೇಷ ತಂಡ ರಚನೆಯಾಗಿದ್ದು, ಯುವತಿ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೊಳ್ಳಲಿದ್ದಾರೆ.

ಸದ್ಯ ಪೊಲೀಸರು ಅಪರಿಚಿತನ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದು, ಯುವತಿ ಪೋಷಕರಿಗೆ ಯಾರ ಮೇಲೆ ಸಂಶಯವಿದೆ ಎಂಬ ಬಗ್ಗೆ ವಿಚಾರಣೆ ನಡೆಸಲಿದ್ದಾರೆ. ಮಾರ್ಚ್ 2ರಂದು ರಾತ್ರಿ 12 ರಿಂದ 1 ಗಂಟೆ ಮಧ್ಯೆ ಮಗಳನ್ನು ಬೆಂಗಳೂರಿನ ಹಾಸ್ಟೆಲ್‍ನಿಂದ ಕಿಡ್ನಾಪ್ ಮಾಡಿದ್ದಾರೆ. ಅಕ್ರಮ ಬಂಧನದಲ್ಲಿಟ್ಟು ಹೆದರಿಸಿ ಅಶ್ಲೀಲ ಸಿಡಿ ಮಾಡಿ ಹರಿಬಿಟ್ಟ ಆರೋಪಿಸಿ ಯುವತಿ ತಂದೆ ದೂರಿನಲ್ಲಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಅಪರಿಚಿತರ ವಿರುದ್ಧ ಕೇಸ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Comments

Leave a Reply

Your email address will not be published. Required fields are marked *